Saturday, 9 May 2020

ಜೀವನ ಮೈತ್ರಿ ಭಾಗ ೭೪(74)



ಜೀವನ ಮೈತ್ರಿ ಭಾಗ ೭೪


        ಸೌಜನ್ಯ ಮತ್ತು ಕೇಶವನ ಮದುವೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂತು. ಕೇಶವ ತನ್ನ ಉದ್ಯೋಗದಲ್ಲಿ ಗಂಭೀರವಾಗಿ ತಲ್ಲೀನನಾದ.ಸೌಜನ್ಯ ಮನೆಯಲ್ಲಿ ಕುಳಿತು ಉದಾಸೀನವಾಗಿ  ಅಲ್ಲೊಂದು-ಇಲ್ಲೊಂದು ಭರತನಾಟ್ಯ ,ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲು ಆರಂಭಿಸಿದಳು. ಒಂದೆರಡು ಆರ್ಕೆಸ್ಟ್ರಾತಂಡಗಳು ಕೂಡಾ ಹಾಡಲು ಆಕೆಯನ್ನು ಕರೆದವು. ಅದರಿಂದ ಅಲ್ಪ ಸ್ವಲ್ಪ ಸಂಪಾದನೆಯೂ ಕೂಡ ಅವಳ ಪಾಲಿಗೆ ಬರುತ್ತಿದ್ದಿತು.


       ಅಂದು ಕೇಶವನ ಕೈಗೆ ಅವನ ಮೊದಲ ತಿಂಗಳ ಸಂಬಳ ಜಮಾ ಆಗಿತ್ತು. ಬಹಳ ಹರ್ಷ ಗೊಂಡಿದ್ದ. ಸಂಜೆ ಬರುತ್ತಲೇ ಪ್ರೀತಿಯಿಂದ ಸೌಜನ್ಯಳಿಗೆ ಮಲ್ಲಿಗೆಯನ್ನು ಕೊಂಡುತಂದಿದ್ದ. ಮನೆಗೆ ತಲಪಿದಾಗ ಮೊದಲು ಮಡದಿಗೆ ಇದನ್ನು ಮುಡಿಸಿ ಆಕೆಯ ಮುಖದ ಕಾಂತಿಯನ್ನು ಗಮನಿಸಬೇಕು ಎಂದುಕೊಂಡಿದ್ದ. ಆದರೆ ಮನೆ ತಲುಪುವಾಗ ಸೌಜನ್ಯ ಮನೆಯಲ್ಲಿರಲಿಲ್ಲ ಬಹಳ ನಿರಾಸೆಯಾಯಿತು ಕೇಶವನಿಗೆ. ಆಕೆ ತನ್ನ ಶಾಸ್ತ್ರೀಯ ಸಂಗೀತದ ಗುರುಗಳ ಪಾಠಶಾಲೆಯಲ್ಲಿ ಸಂಗೀತ ವಾರ್ಷಿಕೋತ್ಸವ ಎಂದು ತೆರಳಿದ್ದಳು. ಹಸಿದುಕೊಂಡಿದ್ದರೂ ಕೇಶವನಿಗೆ ತಿಂಡಿ ಮಾಡಿಕೊಳ್ಳುತ್ತಿರುವ ಸಹನೆ ಇರಲಿಲ್ಲ.. ಹೊರಗಡೆ ಹೋಗಿ ಒಂದು ಪ್ಯಾಕೆಟ್ ಬಿಸ್ಕೆಟ್ ತಂದು ಅದನ್ನು ತಿಂದು ರೂಮಿನಲ್ಲಿ ಹೋಗಿ ಬಿದ್ದುಕೊಂಡ.

       ಮೇಜಿನ ಮೇಲೆ ಮಲ್ಲಿಗೆ ಹೂವು ಸೌಜನ್ಯಳಿಗಾಗಿ ಕಾಯುತ್ತಿತ್ತು.ಆದರೆ ಸೌಜನ್ಯಳಿಗೆ ಅದು ಯಾವುದರ ಪರಿವೆಯೇ ಇರಲಿಲ್ಲ .ಗಾಯನ ನಡೆಸುವುದರಲ್ಲಿ,ಆಲಿಸುವುದರಲ್ಲಿ ತಲ್ಲೀನಳಾಗಿದ್ದಳು. ಮಗಳು ಸಂಗೀತ ವಾರ್ಷಿಕೋತ್ಸವಕ್ಕೆ ಹೋದದ್ದನ್ನು ತಿಳಿದು ನರಸಿಂಹರಾಯರು ಮತ್ತು ರೇಖಾ ಆಫೀಸಿನಿಂದ ಸೀದಾ ಅಲ್ಲಿಗೆ ತೆರಳಿದ್ದರು. ಎಲ್ಲಾ ಕಾರ್ಯಕ್ರಮಗಳು ಮುಗಿದ ಮೇಲೆ ಸಮಾಧಾನದಿಂದ ಹೊರಟರು.. ಅವರು ಮನೆ ತಲುಪಿದಾಗ ನಡುರಾತ್ರಿಯಾಗಿತ್ತು. ಕೇಶವನಿಗೆ ಗಾಢ ನಿದ್ರೆ ಆವರಿಸಿತ್ತು.


        ಕರೆಗಂಟೆ ಬಾರಿಸಿದರು ಕೇಳಿಸಲಿಲ್ಲ ಕೇಶವನಿಗೆ.ಕೊನೆಗೆ ನರಸಿಂಹರಾಯರು ತಮ್ಮ ಕಾರಿನಲ್ಲಿದ್ದ ಮನೆಯ ಕೀಯನ್ನು ಹುಡುಕಿ ಅದರಿಂದ ಲಾಕ್ ತೆಗೆದು ಮನೆಯೊಳಗೆ ಪ್ರವೇಶ ಮಾಡಬೇಕಾಯಿತು. ಸೌಜನ್ಯ ಪತಿಯನ್ನು ಕಾಣದೆ ಮೊದಲು ಮಾಳಿಗೆಯ ತನ್ನ ರೂಮಿಗೆ ಹೋದಳು. ನಿದ್ದೆಯಲ್ಲಿದ್ದ ಪತಿ ..ಮೇಜಿನಮೇಲೆ ಮಲ್ಲಿಗೆ ಹೂವನ್ನು ಕಂಡು ...ನನಗಾಗಿ ಹೂವನ್ನು ತಂದು ಕಾದಿದ್ದರು ಅನಿಸುತ್ತದೆ ..ಎಷ್ಟು ಬೇಸರ ಪಟ್ಟುಕೊಂಡರೋ ಏನೋ.. ಎಂದು ಸಕ್ಕರೆ ನಿದ್ದೆಯಲ್ಲಿದ್ದ ತನ್ನ ಪತಿಯತ್ತ ಬಾಗಿದಳು .

      ಕೇಶವ ಮಾತ್ರ ನಿದ್ದೆಯಿಂದ ಏಳಲಿಲ್ಲ.ತಾನು ಸುಮ್ಮನಾಗಿ... ಫ್ರೆಶ್ ಆಗಿ ಮಲಗಿಕೊಂಡಳು.. ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ.. ಪತಿಗೆ ಸಮಯಕ್ಕೆ ಸರಿಯಾಗಿ ಮಾಡಿಕೊಡಲು  ಹೊರಟಿಲ್ಲ. ಇದು ಕೇಶವನಿಗೆ ಸಿಟ್ಟು ತರಿಸಿತ್ತು. ಸೌಜನ್ಯಾಳ ಮೇಲೆ ಹರಿಹಾಯ್ದ.
ದಡಬಡನೆ ಎದ್ದು ಸೌಜನ್ಯ ಅಡುಗೆ ರೂಮಿನತ್ತ ದೌಡಾಯಿಸಿದರು. ರೇಖಾ ಆಗಲೇ ಉಪ್ಪಿಟ್ಟು ಮಾಡಿಟ್ಟಿದ್ದಳು.. ಸೌಜನ್ಯ ಕಾಫಿ ಬೆರೆಸಿ ಕೇಶವನ ಕೈಗಿತ್ತಳು.. ಕಳೆದ ಎರಡು ಮೂರು ದಿನದಿಂದ ಉಪ್ಪಿಟ್ಟು ಮಾಡಿದ್ದರಿಂದ ಅದನ್ನೇ ತಿಂದು ಕೇಶವನ ನಾಲಿಗೆ ಕೆಟ್ಟಿತ್ತು. ಸೌಜನ್ಯಳ ಮೇಲೆ ಪುನಃ ಬೈಗುಳದ ಸುರಿಮಳೆ. ಈ ಬಾರಿ ರೇಖಾ ತಾನು ಮಗಳ ಪರವಾಗಿ ವಾದಿಸಿದ್ದರು.
ಸಣ್ಣ ವಾಗ್ವಾದವೇ ನಡೆಯಿತು. ನರಸಿಂಹರಾಯರು ಕಣ್ಣಲ್ಲಿ ಮಡದಿಯನ್ನು ಗದರಿಸಿ ಸುಮ್ಮನಿರು ಎಂದರೆ.ಆಕೆ ಮಾತ್ರ ಸೌಜನ್ಯಳಿಗಿಂತ ಒಂದು ಹೆಜ್ಜೆ ಮುಂದೆಯಿಟ್ಟು ಬಾಯಿ ಮಾಡಿದಳು. ಅರ್ಧದಿಂದಲೇ ತಿಂಡಿ ತಿನ್ನುವುದು ನಿಲ್ಲಿಸಿ ಹೊರಟ ಕೇಶವ.


         ಸೌಜನ್ಯಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.ರೇಖಾ ಮತ್ತು ನರಸಿಂಹರಾಯರು ತಿಂಡಿ ಮುಗಿಸಿ ಆಫೀಸಿಗೆ ಹೊರಟರು. ಸೌಜನ್ಯ ರೂಮಿನಲ್ಲಿ ಬಿದ್ದುಕೊಂಡು "ಏನು ಮಾಡುವುದು.. ಪತಿಯನ್ನು ಸಮಾಧಾನಗೊಳಿಸಲು" ಎಂದು ಆಲೋಚನೆ ಮಾಡುತ್ತಿದ್ದಳು.ಆಫೀಸಿಗೆ ಹೊರಟಾಗ ಕಾರಿನಲ್ಲಿ ನರಸಿಂಹರಾಯರು ಮತ್ತೊಮ್ಮೆ ಮಡದಿಗೆ ಬುದ್ಧಿವಾದ ಹೇಳಿದರು." ಗಂಡ-ಹೆಂಡತಿಯ ಮಧ್ಯೆ ನಾವು ಮಾತನಾಡಬಾರದು. ನಿಷ್ಠುರಕ್ಕೆ ಕಾರಣವಾಗುತ್ತದೆ " ಎಂದು. ಆದರೆ ರೇಖಾಳ ಉದ್ದ ನಾಲಿಗೆ ಪತಿಯ ಮಾತನ್ನು ತಿರಸ್ಕರಿಸಿತು.


        ಸಂಜೆ ಬರುತ್ತಲೇ ಅಳಿಯನ ವಿರುದ್ಧ ಏನು ಮಾತನಾಡಬೇಕೆಂದು ಒಂದಷ್ಟು ಪಟ್ಟಿಯನ್ನೇ ಮಾಡಿಕೊಂಡಿದ್ದರು. ಇಂದು ಕೇಶವ ಆಫೀಸಿನ ಹೆಚ್ಚುವರಿ ಕೆಲಸದಿಂದಾಗಿ ತಡವಾಗಿ ಬಂದಿದ್ದ. ಅಳಿಯ ಬರುವ ಮೊದಲೇ ರೇಖಾ ಮತ್ತು ನರಸಿಂಹರಾಯರು ಮನೆಗೆ ಬಂದಿದ್ದರು.ಸೌಜನ್ಯ ಸಿಟ್ಟು ಮಾಡಿಕೊಂಡ ಪತಿಯನ್ನು ರಮಿಸುವ ಸಲುವಾಗಿ ಮಾವಿನಹಣ್ಣಿನ ಜ್ಯೂಸ್ ಅನ್ನು ಮಾಡಿಟ್ಟಿದ್ದಳು. ಮಡದಿಯ ಕೈ ರುಚಿಯನ್ನು ಸವಿದು ಹೊಟ್ಟೆ ತಣಿದು ಸುಮ್ಮನೆ ರೂಮಿನತ್ತ ಸಾಗಿದ...ಆದರೆ ರೇಖಾ ಮಾತ್ರ ಇದಕ್ಕೆ ವಿರುದ್ಧವಾಗಿ ಅಳಿಯಂದಿರನ್ನು ಮಾತಿಗೆಳೆದರು.. ಬೆಳಗಿನ ಮಾತನ್ನು ಮುಂದುವರಿಸಿ ಮಾತಿಗೆ ಮಾತು ಬೆಳೆಯಿತು. ರೇಖಾ ಕೋಪದ ಭರದಲ್ಲಿ " ನಿನ್ನ ಅಪ್ಪನ ಆಸ್ತಿಯಿಂದ ಪಾಲು ತೆಗೆದುಕೊಂಡು ..ಸೌಜನ್ಯ ಹೆಸರಿನಲ್ಲಿರುವ ಪಕ್ಕದ ಖಾಲಿ ಸೈಟಿನಲ್ಲಿ ಮನೆ ಕಟ್ಟಿ ಕುಳಿತುಕೊಳ್ಳಿ"ಎಂದಳು.

        ಮಹಾನ್ ಸ್ವಾಭಿಮಾನಿಯಾದ ಕೇಶವನಿಗೆ ಈ ವಿಷಯದಲ್ಲಿ ಮಾತ್ರ ಸುಮ್ಮನೆ ಇರುವುದಕ್ಕೆ ಸಾಧ್ಯವೇ ಆಗಲಿಲ್ಲ."ನನ್ನ ಮಡದಿಯನ್ನು ನಾನು ರಟ್ಟೆ ಮುರಿದು ಹೊಟ್ಟೆ ತುಂಬಿಸುತ್ತೇನೆಯೇ ಹೊರತು ತಲೆತಲಾಂತರದಿಂದ ಬಂದ ನಮ್ಮ ಆಸ್ತಿಯಲ್ಲಿ ಪಾಲುಕೇಳುವುದಿಲ್ಲ " ಎಂದು ಸ್ಪಷ್ಟಪಡಿಸಿದ.

"ನಿನ್ನ ಪಾಲಿನ ಭೂಮಿ ಕೇಳು.. ಅದನ್ನು ಯಾರಿಗಾದರೂ ಮಾರಿ ದುಡ್ಡಿನಿಂದ ಇನ್ನೊಂದು ದೊಡ್ಡ ಬಂಗಲೆಯನ್ನು ಕಟ್ಟಿ ..ನೀವು ಸುಖವಾಗಿ ಬಾಳಿ .. ನಾವು ತೊಂದರೆ ಕೊಡಲಾರೆವು.."ಅಂದರು ರೇಖಾ..

ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಕೇಶವ "ನಿಮ್ಮ ಈ ಭವ್ಯ ಬಂಗಲೆಯೂ ಬೇಡ.. ನಿಮ್ಮ ಆದರಾತಿಥ್ಯವೂ ಬೇಡ.. ನಾನು ಕಷ್ಟಪಟ್ಟು ದುಡಿದು ನನ್ನ ಕುಟುಂಬವನ್ನು ನಡೆಸುತ್ತೇನೆ" ಎಂದು ಸಿಟ್ಟಿನಿಂದಲೇ ಅಬ್ಬರಿಸಿದ.


    ಪ್ರತಿಯಾಗಿ ಮಾತನಾಡಲು ಹೊರಟ ರೇಖಾಳನ್ನು ತಡೆದು ನಿಲ್ಲಿಸಿದರು ಪತಿ. "ಸಾಕು ಮಾತನಾಡಿದ್ದು" ಎಂದರು ನರಸಿಂಹರಾಯರು ಮಡದಿಗೆ..ಕೇಶವ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದ.. ಸೌಜನ್ಯಳ ಕೈ ಹಿಡಿದು" ಹೋಗೋಣ .." ಎಂದು  ಕರೆದುಕೊಂಡು ಹೊರಟ.
"ಎಲ್ಲಿಗೆ ಹೋಗುವಿರಿ ...ಹೀಗೆ ಈ ಹೊತ್ತಿನಲ್ಲಿ.. ಜೊತೆಯಾಗಿ ಇರೋಣ ಇಲ್ಲಿ..." ಎನ್ನುತ್ತಾ ನರಸಿಂಹರಾಯರು ಅಳಿಯನನ್ನು ಸಮಾಧಾನಿಸಿದರು.

ಸೌಜನ್ಯ ಕೂಡ ಪತಿಯನ್ನು ರಮಿಸಲು ನೋಡಿದಳು.

ಯಾವುದಕ್ಕೂ ಮಣಿಯದೇ ಕೇಶವ ಮಾತ್ರ ಸೌಜನ್ಯಳ ಕೈಹಿಡಿದುಕೊಂಡು ತಾನು ತಂದಿದ್ದ ಅಗತ್ಯವಸ್ತುಗಳನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಹೊರಗೆ ಹೊರಟ.. ನಾಟಕೀಯವಾಗಿ ಒಂದು ಘಟನೆ ನಡೆದು ಹೋಯಿತು. ಅಳಿಯ ಮಗಳು ಮನೆಯಿಂದ ಹೊರಗೆ ಬಿದ್ದರು.
. ಆದರೂ ರೇಖಾ ತನ್ನದೇ ಸರಿ ಎಂದು ವಾದಿಸುತ್ತಿದ್ದರು..ನರಸಿಂಹರಾಯರು ಮಡದಿಯ ವಿವೇಚನಾರಹಿತ ಮುಂಗೋಪಕ್ಕೆ ತಾವೂ ಗರಂ ಆಗಿ ದನಿಯೇರಿಸಿದರು.


           ******


          ಶಾಸ್ತ್ರೀ ನಿವಾಸದಲ್ಲಿ ಮಗಳ ಮದುವೆ ಸಂಭ್ರಮ .ಮದುವೆಗೆ ಇನ್ನೆರಡು ದಿನವಿರುವುದು ಎಂದಾಗ ಸೀನಪ್ಪ ಬಂದು ಕೊಪ್ಪರಿಗೆ ತೊಳೆದಿಟ್ಟು ತೆರಳಿದ.ಕೆಲಸದಾಳುಗಳು  ಉಪ್ಪರಿಗೆಯಲ್ಲಿದ್ದ ಪಾತ್ರೆಗಳನ್ನು ಕೆಳಗಿಳಿಸಿ ಶುಭ್ರವಾಗಿ ತೊಳೆದುಕೊಟ್ಟರು.ಅಡಿಕೆಸೋಗೆ,ತೆಂಗಿನಗರಿಗಳನ್ನು ಬಳಸಿ ಸುಂದರವಾದ ಚಪ್ಪರ ನಿರ್ಮಾಣಗೊಂಡಿತ್ತು.ಅಂಗಳವಿಡೀ ಸೆಗಣಿಸಾರಿಸಿ ಸ್ವಚ್ಛವಾಗಿತ್ತು.ಪಾಕಶಾಲೆಯಲ್ಲಿ ಹಿಂದಿನಕಾಲದ ದೊಡ್ಡ ದೊಡ್ಡ ಪಾತ್ರೆಗಳು, ಪಾಕವನ್ನು ತೊಳಸುವ ದಾಣೆಗಳು ಬಹಳ ಆಕರ್ಷಣೀಯವಾಗಿ ತೋರುತ್ತಿದ್ದವು.ನೆರೆಹೊರೆಯವರು ತರಕಾರಿಗಳನ್ನು ನೀಡುತ್ತಿದ್ದರು.ಅದೆಲ್ಲ ಪಾಕಶಾಲೆಯ ಮುಂದೆ ಒಪ್ಪ ಓರಣವಾಗಿ ಜೋಡಣೆಯಾಗುತ್ತಿತ್ತು.ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ತಂದು ಶಾಸ್ತ್ರಿಗಳು ಜೋಪಾನವಾಗಿ ಇಟ್ಟಿದ್ದರು.ಶ್ಯಾಮ ಶಾಸ್ತ್ರಿ ಗಳು ಹಿಂದೆ ಕೈ ಕಟ್ಟಿಕೊಂಡು ಎಲ್ಲವನ್ನೂ ವೀಕ್ಷಿಸಿ ತಮ್ಮ ಸಲಹೆಸೂಚನೆಗಳನ್ನು ನೀಡುತ್ತಿದ್ದರು.


    ಮದುವೆಯ ಮುನ್ನಾ ದಿನ ಲೈಟಿಂಗ್ ವ್ಯವಸ್ಥೆ ಮಾಡಿ ಹೋದರು.ಅಡುಗೆ ಕಿಟ್ಟಣ್ಣ ಬೆಳಗ್ಗೆಯೇ ಬಂದು ಹೋಳಿಗೆ ತಯಾರಿಗೆ ಕೈ ಹಾಕಿದರು.ಹೊತ್ತೇರುತ್ತಿದ್ದಂತೆ ಕಿಟ್ಟಣ್ಣನಿಗೆ ಜೊತೆಗೆ ಮತ್ತೆ ಐದು ಜನ ಸೇರಿಕೊಂಡರು.ಸಂಜೆಯಾಗುತ್ತಲೇ ಒಟ್ಟು ಹನ್ನೆರಡು ಜನ ಬಾಣಸಿಗರು ಮರುದಿನದ ಮದುವೆಯ ಔತಣ ಸಿದ್ಧಪಡಿಸಲು ತೊಡಗಿದ್ದರು.ಬೆಂಗಳೂರಿನಿಂದ ಶಂಕರ ಶಾಸ್ತ್ರಿಗಳ ಕುಟುಂಬ ಬೆಳಗ್ಗೆಯೇ ಆಗಮಿಸಿತ್ತು.ಸಂಜೆ ಸಾವಿತ್ರಿಯನ್ನೂ ಮಕ್ಕಳನ್ನೂ ಕರೆದುಕೊಂಡು ಬಂದರು ಶಂಕರ ಶಾಸ್ತ್ರಿಗಳು.


       ಮಂಗಳಮ್ಮನ ತವರು ಮನೆಯವರು ಎಲ್ಲರೂ ಆಗಮಿಸಿದ್ದರು.ತಂಗಿಯ ಕುಟುಂಬ,ಅಣ್ಣನ ಕುಟುಂಬದ ಸದಸ್ಯರು ಎಲ್ಲರೂ ಬಂದು ಮನೆ ಸಂಜೆಯಾಗುತ್ತಿದ್ದಂತೆ ಕಳೆಗಟ್ಟಿತ್ತು.ಮೈತ್ರಿಯ ಮುಖದಲ್ಲಿ ಸಂತೋಷ,ನಾಳೆಯ ದಿನ ಹೇಗೋ ಏನೋ ಎಂಬ ಕಳವಳ ಎರಡೂ ಎದ್ದು ತೋರುತ್ತಿತ್ತು.
ಬೆಂಗಳೂರಿನಿಂದ ಶಶಿಯ ಮಗ ಮುರಲಿ ಆಗಮಿಸಿದ್ದ.ಅಪರೂಪಕ್ಕೆ ಬಂದ ಪುಳ್ಳಿ ಎಂದು ಮಹಾಲಕ್ಷ್ಮಿ ಅಮ್ಮ ಬಹಳ ಅಕ್ಕರೆ ತೋರಿದರು."ಶಶಿಗೂ ಬರಬಹುದಿತ್ತು " ಎಂದು ಹೇಳಿದರು."ಅಮ್ಮ, ಅಪ್ಪ ,ವೆಂಕಟ್ ನಾಳೆ ಬರುತ್ತಾರೆ "ಎಂದ ಮುರಲಿ..

 
      ಮಹೇಶನ ತಲೆಗೆ ಹತ್ತಾರು ಕೆಲಸಗಳನ್ನು ಒಮ್ಮೆಲೇ ಹೊರಿಸುತ್ತಿದ್ದರು ತಂದೆ ಭಾಸ್ಕರ ಶಾಸ್ತ್ರಿಗಳು.ಎಲ್ಲವನ್ನೂ ಚುರುಕಾಗಿ ನಿಭಾಯಿಸುತ್ತಿದ್ದವನಿಗೆ ಇಂದು ಅಕ್ಕನನ್ನು ರೇಗಿಸಲು ಸಮಯವೇ ಸಿಗಲಿಲ್ಲ.ಸಂಜನಾ,ವಂದನಾ , ಮೈತ್ರಿ ಸೇರಿಕೊಂಡು ಮದುವೆಯ ದಿನ ತೊಡುವ ಡ್ರೆಸ್,ಅಲಂಕಾರರ ಬಗ್ಗೆ ಚರ್ಚಿಸಿದರು.ಅಷ್ಟರಲ್ಲಿ  ಮಹೇಶ್ ಬಣ್ಣದ ಕಾಗದವನ್ನು ತಂದು ಅಕ್ಕಂದಿರ ಮುಂದಿಟ್ಟ."ಇದನ್ನು ಚಂದಕ್ಕೆ ಕತ್ತರಿಸಿ ಮಂಟಪದ ಕಂಬಕ್ಕೆ ಹಚ್ಚಿ " ಎಂದಾಗ ಕಟ್ಟಿಂಗ್ ಆರಂಭಿಸಿದರು.ಮೈತ್ರಿಯ ಸೋದರಮಾವ,ಅವರ ಮಕ್ಕಳೂ ಸೇರಿದರು.ಬಣ್ಣಬಣ್ಣದ ಬೆಲೂನುಗಳನ್ನು ಅಲ್ಲಲ್ಲಿ ನೇತುಹಾಕಿದರು.ಮಕ್ಕಳಿಗೆ ಬೆಲೂನಿಗೆ ಗಾಳಿ ತುಂಬುವುದು ಬಹಳ ಖುಷಿಕೊಟ್ಟಿತು.ಮಾವಿನ ತೋರಣವನ್ನು ಸಿದ್ಧಪಡಿಸಿದರು.ಚಪ್ಪರದ ಮುಂಭಾಗದಲ್ಲಿ ಮಾವಿನ ತೋರಣ,ಗೊನೆ ಸಹಿತ ಬಾಳೆಯ ಗಿಡವನ್ನು ನಿಲ್ಲಿಸಲಾಯಿತು.ಹೆಣ್ಣಮಕ್ಕಳು ಅಲ್ಲಲ್ಲಿ ರಂಗೋಲಿಯನ್ನು ಬಿಡಿಸಿದರು.


ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
09-05-2020.

ಮುಂದಿನ ಭಾಗ...ಸೋಮವಾರ..
   

2 comments:

  1. ಕೇಶವ್ sowjanya ರ ಬದುಕು ಚೆನ್ನಾಗಿ ಇರಲಿ 😔

    ReplyDelete
  2. ಹೌದು... ಬದುಕು ಹಸನಾಗಲಿ..

    ReplyDelete