Monday, 11 May 2020

ಜೀವನ ಮೈತ್ರಿ ಭಾಗ ೭೫(75)



ಜೀವನ ಮೈತ್ರಿ ಭಾಗ ೭೫


         ಮಂಗಳಮ್ಮ  ಮತ್ತು ಗಾಯತ್ರಿ ಅಡುಗೆಯವರಿಗೆ ಕೇಳಿದ್ದನ್ನು ಕೊಡುವುದರಲ್ಲಿ ನಿರತರಾಗಿದ್ದರು. ಶಂಕರ ಶಾಸ್ತ್ರಿಗಳು ಬಂದವರನ್ನು ಉಪಚರಿಸುತ್ತಿದ್ದರು. ಸಂಜೆ ವೇಳೆಗೆ ಪರಿಕರ್ಮಿ ಸತ್ಯಣ್ಣ ಆಗಮಿಸುತ್ತಲೇ "ಕ್ರಿಯಾಭಾಗಕ್ಕೆ ಇರುವುದು ಎಲ್ಲವೂ ರೆಡಿ ಇದೆಯಾ" ಎಂದು ಕೇಳಿದರು. ಬಾಯಾರಿಕೆ ಕೊಟ್ಟ ಶಂಕರ ಶಾಸ್ತ್ರಿಗಳಲ್ಲಿ ಆ ದಿನ ಹಗಲು ಅವರು ಭಾಗವಹಿಸಿದ ಕಾರ್ಯಕ್ರಮ ಯಾವುದು ..ಏನು ..ಎಲ್ಲಿ.. ಎಂಬ ಸಂಪೂರ್ಣ ವಿವರವನ್ನು ಹೇಳ್ಬಿಟ್ಟು. ಬೇಗಬೇಗನೆ ತನ್ನ ಬಟ್ಟೆಯನ್ನು ಬದಲಾಯಿಸಿ ಕೇಸರಿ  ಪಂಚೆ ಉಟ್ಟುಕೊಂಡರು.ಅಲ್ಲಿಗೆ ಬಂದ ಮಹೇಶ್

"ಓಹೋ..ಸತ್ಯಣ್ಣ..ಬಾಯಾರಿಕೆ.
ಆಯ್ತಾ" ಎಂದು ವಿಚಾರಿಸಿಕೊಳ್ಳುತ್ತಾ..." ಏನು ಎಲ್ಲರೂ ಯುನಿಫಾರ್ಮ್ ಧರಿಸಿರುವಂತಿದೆ" ಎಂದನು.. ಸುತ್ತಲೂ ಒಮ್ಮೆ ಕಣ್ಣಾಡಿಸಿ ಸತ್ಯಣ್ಣ "ಹೌದಲ್ಲ..ಕೇಸರಿ ಪಂಚೆಯುಟ್ಟವರು ಹಲವರಿದ್ದಾರೆ.. "ಎಂದಾಗ ಅಡುಗೆ ಕಿಟ್ಟಣ್ಣ "ಕೇಸರಿಯ ಪಂಚೆಯಲ್ಲಿ ಕೆಸರಾದರೆ ಬೇಗನೆ ಗೊತ್ತಾಗದು.ಎಷ್ಟು ಕೊಳಕು ಮಾಡಿಕೊಳ್ಳುತ್ತೀರೆಂದು ಮಡದಿಯಿಂದ ಬೈಗುಳವೂ ಸಿಗಲಾರದು..ನಾನಂತೂ ಕೇಸರಿ ಪಾರ್ಟಿ .." ಎಂದರು..ಸಟ್ಟುಗದಲ್ಲಿ ಬಾಣಲೆಯಲ್ಲಿ ಹುರಿಯುತ್ತಿದ್ದ ಹೆಸರುಬೇಳೆಯನ್ನು ತಿರುವುತ್ತಾ...


      ಘಮ ಘಮ ಮಂಗಳೂರು ಮಲ್ಲಿಗೆ ಹೂವಿನ ಅಟ್ಟೆ ಆಗಮಿಸಿದ್ದು.. ಅಲಂಕಾರಕ್ಕೆಂದು ಸೇವಂತಿಗೆ ಮಾಲೆ ತಂದಾಗಿತ್ತು. ಗುಲಾಬಿ ಹೂಗಳು ಒಂದನ್ನೊಂದು ಮೀರಿಸುವಂತೆ ಕಂಗೊಳಿಸುತ್ತಿದ್ದವು. ರಾತ್ರಿ ಎಂಟು ಗಂಟೆ  ಆಗುತ್ತಿದ್ದಂತೆ ನೆರೆಹೊರೆಯವರೆಲ್ಲ ಒಬ್ಬೊಬ್ಬರೇ ಆಗಮಿಸಿದ್ದರು
ಗುರಿಕಾರ ಪರಮೇಶ್ವರ ಭಟ್ಟರು ಬಂದವರಲ್ಲಿ "ತರಕಾರಿ ಹಚ್ಚಲು ಶುರು ಮಾಡೋಣ " ಎಂದರು. ಎದುರಿಸಲು ಸಾಲಾಗಿ ಕುಳಿತು ನೂರಾರು ಮಂದಿ ತರಕಾರಿ ಹಚ್ಚಲು ಆರಂಭಿಸಿದರು. "ತರಕಾರಿ ಹೆಚ್ಚುವವರಿಗೆ ಕಾಫಿ ರೆಡಿಯಾಗಿದೆಯಾ" ಕೇಳಿದರು ಕಿಟ್ಟಣ್ಣನಲ್ಲಿ ಭಾಸ್ಕರ ಶಾಸ್ತ್ರಿಗಳು. ಒಮ್ಮೆ ಜಾರುತ್ತಿದ್ದ ತನ್ನ ಜನಿವಾರವನ್ನು ಸರಿಪಡಿಸುತ್ತಾ "ಓಹೋ.. ಶಾಸ್ತ್ರಿಯಣ್ಣ ರೆಡಿಯಾಗಿದೆ.." ಎನ್ನುತ್ತಾ ದೊಡ್ಡ ಬಕೆಟ್ ನಲ್ಲಿ ಇದ್ದ ಕಾಫಿಯನ್ನು ಮಗ್ ನಲ್ಲಿ ತೆಗೆದು ನಾಲ್ಕು ಸಲ ಹೊಡೆದು ಚೆನ್ನಾಗಿ ನೊರೆ ಬರೆಸಿದರು.


        ಮಹೇಶ ಮತ್ತು ಶಂಕರ ಶಾಸ್ತ್ರಿಗಳು ಎಲ್ಲರಿಗೂ ಕಾಫಿ ಕೊಟ್ಟರು. ಮೈತ್ರಿಯ ಚಿಕ್ಕಮ್ಮ ಮತ್ತು ಸೋದರ ಮಾವನ ಹೆಂಡತಿ ಇಬ್ಬರೂ ಸೇರಿ ಸಿಂಗಾರದಿಂದ ಮಾಲೆ  ಹೆಣೆದರು. ವಧು-ವರರು ಪರಸ್ಪರ ಹಾಕಿಕೊಳ್ಳಬೇಕಾದ ಮಾಲೆಯನ್ನು  ಎಳೆಯ ಸಿಂಗಾರದಿಂದ ಬಹಳ ಚೆನ್ನಾಗಿ  ನೇಯ್ದರು.ಸಿಂಗಾರದ ಬಾಸಿಂಗ ತಯಾರಾಯಿತು.


         ಸಂಜನಾ ಮತ್ತು ವಂದನಾ  ಚಪ್ಪರದ ಒಂದು ಬದಿಯಲ್ಲಿ ಕುಳಿತು ಮೆಹಂದಿ ಹಾಕಲು ಶುರು ಮಾಡಿದ್ದರು. ಪುಟ್ಟ ಪುಟ್ಟ ಮಕ್ಕಳೆಲ್ಲಾ  ಬಂದು ತಮ್ಮ ಕೈಗೊಂಡಿದ್ದರು. ಮೈತ್ರಿಗೂ ಹಾಕಿಸಿಕೊಳ್ಳಲೇಬೇಕು ಎಂಬ ಆಸೆ. "ನೆಕ್ಸ್ಟ್ ನನಗೆ ಹಾಕಬೇಕು "ಎಂದು ಸಂಜನಾಳ ಮುಂದೆ ಕೈಯೊಡ್ಡಿ ಕುಳಿತಿದ್ದಳು ಮೈತ್ರಿ. ಭಾಸ್ಕರ ಶಾಸ್ತ್ರಿಗಳು ಕೆಲಸದ ತರಾತುರಿಯಲ್ಲಿ  ಆಚೀಚೆ ಹೋಗುವಾಗ ಒಮ್ಮೆ ಕಣ್ಣು ಹಾಯಿಸಿದರು. "ಮದರಂಗಿ ಶಾಸ್ತ್ರವ "ಅಂತ ಕೇಳಿದರು.
"ಹೌದು.. ಹೌದು ದೊಡ್ಡಪ್ಪಾ..."ಎಂದಳು ಸಂಜನಾ...

ಮೈತ್ರಿಯ ಮುಖ ನೋಡಿ ಗಂಭೀರವಾಗಿ.. "ಮಗಳೇ ..ನಿನ್ನ ಕೈಗೂ ಹಾಕಿಸಿಕೊಳ್ಳಲು ಇದೆಯಾ..?" ಎಂದು ಕೇಳಿದರು.

ಅವಳು ಎಲ್ಲಾ ಅರ್ಥವಾದಂತೆ ಸುಮ್ಮನಿದ್ದರೂ.. ಸಂಜನಾ ಏನು ಅರ್ಥವಾಗದೆ "ಹೌದು ದೊಡ್ಡಪ್ಪ..  ಕೈಗೆ-ಕಾಲಿಗೆ ಮದರಂಗಿ ಹಾಕಲು ಒಳ್ಳೆಯ ಡಿಸೈನ್ ಆಯ್ಕೆ ಮಾಡಿದ್ದೇನೆ ..ನೋಡಿ.." ಎಂದಳು.


        ಮೈತ್ರಿಯ ಕಡೆಗೆ ಕಣ್ಣು ಕೆಕ್ಕರಿಸಿ ನೋಡಿದರು ಅಪ್ಪ ..."ಮಗಳೇ ..ನಿನ್ನ ಕೈಗಳಿಗೆ ಮೆಹಂದಿ ಹಾಕುವುದು ಬೇಡ...  ನಮ್ಮ ಸಂಪ್ರದಾಯದಲ್ಲಿ ಮೆಹಂದಿಶಾಸ್ತ್ರ ಇಲ್ಲ.. ಮದುಮಗಳಿಗೆ ಮೆಹಂದಿ ಹಾಕುವ ಕ್ರಮ ಮೊದಲಿನಿಂದ ನಮ್ಮಲ್ಲಿ ಬಂದಿಲ್ಲ. ಇತ್ತೀಚೆಗೆ ಇತರರನ್ನು ನೋಡಿ ಆರಂಭಿಸಿದ ಕ್ರಮವಿದು. ಅವರೆಲ್ಲ ಬೇಕಾದರೆ ಹಾಕಿಕೊಳ್ಳಲಿ.. ನಿನ್ನ ಕೈಗಳಿಗೆ ಚಿತ್ತಾರ ಬಿಡಿಸಿಕೊಳ್ಳಲು ಹೋಗಬೇಡ..." ಎಂದು ಖಾರವಾಗಿ ನುಡಿದರು. "ಸರಿ ..."ಎಂದು ತಲೆ ಅಲ್ಲಾಡಿಸಿದ ಮೈತ್ರಿಯ ಕಣ್ಣುಗಳಲ್ಲಿ ನೀರು ತುಂಬಿತ್ತು. ಆಸೆಯಲ್ಲ ಕೊಚ್ಚಿಹೋದ ಭಾವ. ಸಂಜನಾ ವಂದನಾರಿಗಂತೂ     ಒಮ್ಮೆಲೆ ನಿರಾಶೆಯಾಯಿತು... ಆದರೂ ದೊಡ್ಡಪ್ಪನ ಮಾತು ಮೀರುವಂತಿಲ್ಲ... ಎಂದು ಸುಮ್ಮನಾದರು. ನಗರದಲ್ಲಿ ಹುಟ್ಟಿ ಬೆಳೆದ ಸಂಜನಾಗೆ ಮೆಹಂದಿ ಸಂಪ್ರದಾಯದ ಇಲ್ಲಿ ಇಲ್ಲ  ಎಂಬುದು ಈಗಷ್ಟೇ ತಿಳಿದದ್ದು."ಅಕ್ಕನಿಗೆ ಹಾಕದೆ ಇದ್ದದ್ದು ನಮಗೆ ಯಾಕೆ..?" ಎಂದು ಸಂಜನಾ ವಂದನ ಕೂಡ ತಮ್ಮ ಕೈಗಳಿಗೆ ಮೆಹಂದಿ ಹಾಕಲಿಲ್ಲ. ಮಕ್ಕಳಿಗೆ  ಹಾಕಿ ನನ್ನ ಒಳಗೆ ತೆಗೆದುಕೊಂಡು ಹೋದರು.

        ರೂಮು ಸೇರಿದ್ದ ಮೈತ್ರಿಯ ಕಣ್ಣುಗಳು ಹನಿಜಿನುಗಿಸಲು ಕಾದುಕುಳಿತಿದ್ದವು..ಈಗಲೇ ಹೀಗೆ...ಇನ್ನು ಮುಂದಿನ ಜೀವನದಲ್ಲಿ ನನ್ನ ಇಷ್ಟ , ಆಸೆ-ಆಕಾಂಕ್ಷೆಗಳನ್ನು ಬಲಿ ಕೊಡಬೇಕಾಗಬಹುದೋ ಏನೋ.. ಎಂದು ಮನಸ್ಸು ಭಾರವಾಗಿತ್ತು. ಅಷ್ಟರಲ್ಲಿ ಅಜ್ಜಿ ಕರೆದರು. "ಗಣಪತಿ ಪೂಜೆ ಮಂಗಳಾರತಿಗೆ ಆಯಿತು . ಬಾ ಮೈತ್ರಿ .."ಎಂದು. ಕಣ್ಣೊರೆಸಿಕೊಂಡು ತೆರಳಿದಳು ಮೈತ್ರಿ.
ಗಣಪತಿ ಪೂಜೆಯ ಆಗುತ್ತಿದ್ದಂತೆಯೇ ದೊಡ್ಡ ಹರಿವಾಣದಲ್ಲಿ ನೀರು ದೇವರ ಮುಂದೆ ತಂದಿರಿಸಿದರು ..ಮಣೆ ,ಚೂರಿ ,ಬಾಳೆಕಾಯಿ ಎಲ್ಲವೂ ತಯಾರಾಗಿತ್ತು. ಅಡುಗೆ ಕಿಟ್ಟಣ್ಣನಿಗೆ  ಕರೆ ಹೋಯಿತು.  ಬಂದು ಕುಳಿತ ಕಿಟ್ಟಣ್ಣ ಬಾಳೆಕಾಯಿ ಹೋಳುಗಳನ್ನು ಮಾಡಿ ನೀರಿಗೆ ಹಾಕಿದರು. ಕೆಲವು ಹೋಳುಗಳು ಕೆಳಮುಖವಾಗಿದ್ದವು...ಆದರೆ ಬಹಳಷ್ಟು ಮೇಲ್ಮುಖವಾಗಿ ಬಿದ್ದಿದ್ದವು. ಶ್ಯಾಮ ಶಾಸ್ತ್ರಿಗಳು ಮತ್ತು ಭಾಸ್ಕರ ಶಾಸ್ತ್ರಿಗಳು ಇಬ್ಬರು ಲೆಕ್ಕಹಾಕಿ 1000 ಜನ ಭರ್ತಿ ಅಂದರೆ. ಕಿಟ್ಟಣ್ಣ " ಕೆಲವು ತುಂಡುಗಳು   ಅರ್ಧ ಮೇಲೆ ಅರ್ಧ ಕೆಳಗೆ ಅನ್ನುವಂತಿದೆ ... ಸಾವಿರದ ಇನ್ನೂರು ಜನ ಲೆಕ್ಕ ಹಿಡಿಯಬೇಕು.." ಎಂದರು.ಮರುದಿನದ ಕಾರ್ಯಕ್ರಮಕ್ಕೆ ಎಷ್ಟು ಜನ ಆಗಬಹುದು ಎಂದು ಲೆಕ್ಕ ಹಾಕುವ ಒಂದು ಸಾಂಪ್ರದಾಯಿಕ ವಿಧಾನವಿದು. ಅಂದಾಜಿನಂತೆ ಶಾಕಪಾಕ ಗಳನ್ನು ತಯಾರು ಮಾಡಲಾಗುತ್ತದೆ.


          ಹೊರಗೆ ಹೋದ ಕಿಟ್ಟಣ್ಣ ಅದೇ ಅಂದಾಜಿನಲ್ಲಿ ನೆರೆಹೊರೆಯವರೆಲ್ಲ ಕೊರೆದ ತರಕಾರಿಗಳ ಮೇಲೆ ಕಣ್ಣು ಹಾಯಿಸಿ ಯಾವುದು ಕೊರೆದದ್ದು ಸಾಕು... ಯಾವುದು ಇನ್ನೂ ಹೆಚ್ಚು ಇರಬೇಕು ಎಂದು ಹೇಳಿದರು. ನಂತರ ಭೋಜನದ ವ್ಯವಸ್ಥೆಗೆ ಎಲ್ಲರೂ ತಯಾರಾದರು. ಊಟದ ಪಂಕ್ತಿ ಹಾಕಿ ಎಲ್ಲರಿಗೂ ಬಡಿಸಲಾಯಿತು. ಪಾಯಸ ಬರುತ್ತಿದ್ದಂತೆಯೇ ಮಹೇಶ ಅಕ್ಕನಲ್ಲಿ... "ಈಗಿನಿಂದಲೇ ಆರಂಭ ಚೂರ್ಣಿಕೆ ಹೇಳಲು..ಒಂದು ಆಲಾಪ ಹೊರಬರಲಿ ನೋಡೋಣ..." ಎಂದ.

ಮೊದಲೇ ಮೂಡಿಲ್ಲದ ಮೈತ್ರಿಗೆ ಇವನೊಂದು ತಲೆಹರಟೆ.. ಎಂದು ಸಿಟ್ಟು ಬಂತು.. ಅಜ್ಜಿ ಬಂದು "ಒಂದು ಗಣೇಶನ ಸ್ತುತಿ ಹೇಳು ಪುಳ್ಳೀ.." ಎಂದರು.. ಅಷ್ಟರಲ್ಲಾಗಲೇ ಯಾರೋ.. ಲಂಬೋದರ ಲಕುಮಿಕರ ಹೇಳು.. ಎಂದು ನಗುತ್ತಾ ದನಿ ತೆಗೆದರು.

ಸತ್ಯಣ್ಣ ಅಂತೂ " ಮೈತ್ರಿ ಹೇಳದಿದ್ದರೆ ನಾನೊಂದು ಯಕ್ಷಗಾನದ ಪದ ಆರಂಭಿಸುವುದೇ "ಎಂದರು.

ಸೋದರಮಾವ "ಭೋಜನಕಾಲೇ ನಾನು ಹಾಕುತ್ತೇನೆ ..ಆರಂಭಿಸು".. ಎಂದರು.

ಎಲ್ಲರ ಒತ್ತಡಕ್ಕೆ ಮಣಿದ ಮೈತ್ರಿ   "ಗಜವದನ ಬೇಡುವೆ ... ಗೌರಿ ತನಯ... " ಎನ್ನುತ್ತಾ ಸೊಗಸಾಗಿ ಹಾಡಿದಾಗ .. ಸೋದರಮಾವ "ಭೋಜನಕಾಲೇ ನಮಃ ಪಾರ್ವತೀ ಪತೇ ಹರಹರ " ಎಂದಾಗ ಎಲ್ಲರೂ "ಮಾದೇವ" ಎಂದರು..

       ಶಂಕರ ಶಾಸ್ತ್ರಿಗಳು ಗೋವಿಂದನ ನಾಮ ಸ್ಮರಣೆ ಮಾಡಿದರು. "ಭೋಜನಾಂತೇ ಗೋವಿಂದ ನಾಮ ಸ್ಮರಣೇ.. ಗೋವಿಂದ" ಎಂದಾಗ.. ಎಲ್ಲರೂ ಒಕ್ಕೊರಲಿನಿಂದ ಗೋವಿಂದ ಎನ್ನುತ್ತಾ ಭೋಜನದಿಂದ ಎದ್ದರು.

      ಬಂದ ನೆರೆಹೊರೆಯವರು  ತಮ್ಮ ತಮ್ಮ ಮನೆಗೆ ತೆರಳಿದರೆ ಬಂಧು ಮಿತ್ರರೆಲ್ಲರಿಗೂ ಗಾಯತ್ರಿ, ಮಂಗಳಮ್ಮ ಮಲಗಲು ವ್ಯವಸ್ಥೆ ಮಾಡಿಕೊಟ್ಟರು.. ಸಂಜನಾ ವಂದನ "ಅಕ್ಕನ ರೂಮಿನಲ್ಲಿ ತಾವು ಮಲಗುತ್ತೇವೆ " ಎಂದು ಹೊರಟರು.. ಮಹೇಶ "ಇವತ್ತು ಒಂದು ದಿನ... ನಾಳೆ ನಿಮ್ಮನ್ನು ಹೊರಗೆ ಅಟ್ಟುತ್ತಾಳೆ ನೋಡಿ." ಎಂದಾಗ ಮೈತ್ರಿಗೆ ತಮ್ಮನಿಗೆ ಎರಡು ಗುದ್ದಬೇಕು ಅಂತಾಯ್ತು. ಮತ್ತೆ ತಾನೇ ಸುಮ್ಮನಾದಳು.. ಇನ್ನು ಮದುವೆಯಾಗಿ ಹೋದ ಮೇಲೆ ಕಾಲೆಳೆಯಲು ಬಿಡಿ.. ದಿನಾ ಮಾತನಾಡಲೂ ಇವನೆಲ್ಲಿ ಸಿಗ್ತಾನೆ...ಈಗ ತರ್ಲೆ ಮಾಡಿದ್ದೇ ಬಂತು..ಮಂಗಳಮ್ಮ ಬಂದು "ಮಗಳೇ ಬೇಗ ಮಲಗಿಕೋ. ನಾಳೆ ಬೆಳಿಗ್ಗೆ 4 ಗಂಟೆಗೆ ಏಳಬೇಕು .."ಎಂದರು.

      ಮಲಗುವ ಮುನ್ನ ಒಮ್ಮೆ  ಮೊಬೈಲ್ ನೋಡಿದಳು ಮೈತ್ರಿ  ..ಕಿಶನ್ ನ ಪ್ರೇಮ ಸಂದೇಶಗಳು ಒಂದರ ಮೇಲೊಂದು ಕಾದುಕುಳಿತಿದ್ದವು. ಎಲ್ಲವನ್ನೂ ಓದಿ ಕನಸಿನೊಂದಿಗೆ ನಿದ್ದೆಗೆ ಜಾರಿದಳು ಮೈತ್ರಿ..

        ಸೇಸಪ್ಪ ರಾತ್ರಿ ಕೊಪ್ಪರಿಗೆಗೆ ನೀರು ತುಂಬಿಸಿ ಬೆಂಕಿ ಹಾಕಿದ್ದ.ವಿಶಾಲವಾದ ಬಚ್ಚಲು ಮನೆಯ ಹಂಡೆಯಲ್ಲಿ ನೀರು  ಕಾಯಿಸಲು ಮರದ ತುಂಡುಗಳನ್ನು ಒಲೆಗೆ ತುರುಕಿ ಬೆಂಕಿ ಹಾಕಿದ.ತನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದವ ಅವರಲ್ಲಿ ಹೊರಗಿಟ್ಟಿದ್ದ ಪಾತ್ರೆಗಳನ್ನು ಶುಚಿಗೊಳಿಸಲು ಹೇಳಿದ.ಉಳಿದ ಪದಾರ್ಥಗಳನ್ನು ತನ್ನ ಮನೆಗೆ ಒಯ್ಯಲೆಂದು ತೆಗೆದಿರಿಸಿದ.ಮರುದಿನದ ಮದುವೆ ಕಾರ್ಯಕ್ರಮಕ್ಕೆ ಬೇಕಾದ ತಯಾರಿಯನ್ನು ಮುಗಿಸಿಯೇ ಸೇಸಪ್ಪ ಮಕ್ಕಳೊಂದಿಗೆ ಮನೆಗೆ ತೆರಳಿದ.

     ಭಾಸ್ಕರ ಶಾಸ್ತ್ರಿಗಳು ಬೀರುವಿನಲ್ಲಿದ್ದ ಮನೆತನದಲ್ಲಿ ಹಿಂದಿನಿಂದಲೇ ಬಂದಂತಹ ಕಾಸಿನ ಸರ,ಚಿನ್ನದ ಹೂವು,ಚಿನ್ನದ ನೆತ್ತಿಬೊಟ್ಟು, ಚಕ್ರಸರ ,ಕೈಬಳೆ ... ಹೀಗೆ ಎಲ್ಲವನ್ನೂ ಹೊರತೆಗೆದು ಮಂಗಳಮ್ಮನ ಕೈಗಿತ್ತು"ಮಗಳು ನಾಳೆ ಇದರಲ್ಲಿ ಬೇಕಾದ್ದನ್ನು ಹಾಕಿಕೊಳ್ಳಲಿ". ಎಂದರು.


                    ******

         ಕಿಶನ್ ನ ಮನೆಯಲ್ಲಿ ನೆಂಟರಿಷ್ಟರೆಲ್ಲರೂ ಬಂದು ಸೇರಿದ್ದರು. ಸೋದರತ್ತೆ
ಯರು ಸೋದರಮಾವಂದಿರು ಎಲ್ಲರೂ ಸೇರಿ ಮದುವೆಗೆ ತಯಾರಾಗಿದ್ದರು.ಮದುವೆಗೆ ಕೊಂಡೊಯ್ಯುವ  ವಸ್ತುಗಳನ್ನೆಲ್ಲಾ ಸಂಗ್ರಹಿಸಿ  ತುಂಬಿಸಿದರು ಅಪ್ಪ-ಮಗ. ಮಧ್ಯದಲ್ಲಿ ಮೈತ್ರಿಗೆ ಒಂದಷ್ಟು ಸಂದೇಶಗಳನ್ನು ಕಳಿಸಿ ಬಿಡುತ್ತಿದ್ದ. ತಂಗಿಯರ ಕಾಲೆಳೆತ ಜೋರಾಗಿತ್ತು. ನಾಳೆ ಬೆಳಗ್ಗೆ ಏಳಲು ಇಂದು ಬೇಗ ಮಲಗಬೇಕು ಎಂದು ಹೇಳುತ್ತಾ ಎಂಟು ಗಂಟೆಗೆ ಊಟ ಪೂರೈಸಿದರು. ಒಂಬತ್ತಕ್ಕೆ ಎಲ್ಲರೂ ಮಲಗಲು ತೆರಳಿದ್ದರೂ ಕಿಶನ್ ಮಾತ್ರ ಒಂದಷ್ಟು ಸಂದೇಶಗಳನ್ನು ಬರೆದು ಮನಸಿನ ತುಂಬಾ ಮುದ್ಗೊಂಬೆಯನ್ನು ನೆನಪಿಸಿಕೊಂಡು ನಿದ್ರೆ ಹತ್ತದೇ ಹತ್ತಾರು ಸಲ ಮಗ್ಗುಲು ಬದಲಾಯಿಸಿ ನಿದ್ರೆಗೆ ಜಾರಿದ..

          ಗಣೇಶ ಶರ್ಮ ಬೆಳಗ್ಗೆ ಮೂರು ಗಂಟೆಗೇ ಎದ್ದು ಸ್ನಾನ ಮಾಡಲು ಅನುಕೂಲವಾಗುವಂತೆ ರಾತ್ರಿಯೇ ಬಚ್ಚಲು ಮನೆಯ ಹಂಡೆಯಲ್ಲಿ ನೀರು ತುಂಬಿಸಿ ಕಟ್ಟಿಗೆಯ ತುಂಡುಗಳಿಗೆ ಬೆಂಕಿ ತಗುಲಿಸಿ ಬಿಟ್ಟರು.ಬೆಳಗ್ಗೆ ಏಳುವಾಗ ಬಿಸಿಬಿಸಿ ನೀರು ಸಿದ್ಧವಿದ್ದರೆ ಸ್ನಾನಕ್ಕೆ ಸುಲಭ ಎಂದು.

      ಮಮತಾಗೆ ಮಲಗಿದರೂ ನಿದ್ದೆಯೇ ಸುಳಿಯಲಿಲ್ಲ.ನಾಳೆ ಮದುವೆಯೇನೋ ಅವರ ಅಂತಸ್ತಿಗೆ ತಕ್ಕಂತೆ ನಡೆಯಬಹುದು..ಮರುದಿನದ ವಧೂಗೃಹಪ್ರವೇಶ ಸಮಾರಂಭವನ್ನು ಅವರ ಶ್ರೀಮಂತಿಕೆಗೆ ತಕ್ಕಂತೆ ಮಾಡಲು ಸಾಧ್ಯವಾಗಬಹುದಾ... ಯಾರಾದರೂ ಏನಾದರೂ ಅಂದರೆ ಎಂಬ ಆತಂಕ ಒಂದು ಕಡೆಯಿತ್ತು..


ಮುಂದುವರೆಯುವುದು....

✍️...ಅನಿತಾ ಜಿ ಭಟ್
11-05-2020.


2 comments: