ಜೀವನ ಮೈತ್ರಿ ಭಾಗ ೭೭
ಭಾಸ್ಕರ ಶಾಸ್ತ್ರಿಗಳು ಮಗಳು ಮೈತ್ರಿಯೊಂದಿಗೆ ಹಲವಾರು ಬಾರಿ ಕಠಿಣವಾಗಿ ವರ್ತಿಸಿರಬಹುದು ..ಆದರೆ ಮಗಳನ್ನು ಧಾರೆ ಎರೆದು ಕೊಡುವಾಗ ಕಣ್ಣಂಚಿನಿಂದ ನೀರು ಜಿನುಗಿತ್ತು..ಮಂಗಳಮ್ಮನದೂ ಅದೇ ಪರಿಸ್ಥಿತಿ. ಎಷ್ಟೇ ಆದರೂ ಹೆತ್ತ ಕರುಳಲ್ಲವೇ.. ಧಾರೆಯೆರೆದು ಕೊಡುತ್ತಿರುವ ಅಪ್ಪ-ಅಮ್ಮನ ಮುಖ ನೋಡಿದ ಮೈತ್ರಿಗೆ ಕಣ್ಣು ತುಂಬುವ ಮುನ್ನವೇ ಕಿಶನ್ ತುಂಟ ನೋಟ ಹರಿಸಿದ. ಅಲ್ಲಿಗೆ ಅವಳ ಕಣ್ಣೀರು ಮಾಯವಾಗಿ ತುಟಿಯಂಚಿನಲ್ಲಿ ಕಿರುನಗೆ ಮೂಡಿತ್ತು.ಕಿಶನ್ ಗೆ ಗೊತ್ತಿತ್ತು ಹೆಣ್ಣುಮಕ್ಕಳು ಅಳಲು ಆರಂಭಿಸಿದರೆ ಅತ್ತು ಅತ್ತು ಸುಸ್ತಾಗುವವರೆಗೂ ಅಳುತ್ತಾರೆ ಎಂದು. ತನ್ನವಳು ಅಳಬಾರದು ಎಂದು ಅವನ ಪ್ರಯತ್ನವಾಗಿತ್ತು.
ಮೊದಲೇ ಚೆಲುವೆಯಾದ ಮೈತ್ರಿ ಅಲಂಕಾರದಿಂದ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಳು. ಕಿಶನ್ ತನ್ನ ದೃಷ್ಟಿಯನ್ನು ಬೇರೆಡೆಗೆ ಹರಿಸದಷ್ಟು ಆಕೆಯಲ್ಲಿ ಆಕರ್ಷಿತನಾಗಿದ್ದ. ಮದುಮಕ್ಕಳ ತುಂಟತನದ ಕಣ್ಣೋಟ ಕಿಲಕಿಲ ನಗೆ ಬಂದವರಿಗೂ ಖುಷಿ ಕೊಟ್ಟಿತ್ತು.ಕಾರ್ಯಕ್ರಮದ ಮಧ್ಯೆ ಒಂದು ಚೂರು ಬಿಡುವಾದಾಗ ವಿಡಿಯೋ ಮಾಡಲು ಅಂಗಳದ ಅಂಚಿನಲ್ಲಿ ಹೂವಿನ ಗಿಡಗಳ ಮಧ್ಯೆ ವಧು-ವರರಿಬ್ಬರೂ ಸಾಗಿದಾಗ ಸಾಕ್ಷಾತ್ ಶಿವ-ಪಾರ್ವತಿ ಧರೆಗಿಳಿದು ಬಂದಂತೆ ತೋರುತ್ತಿತ್ತು. ಕಿಶನ್ ಮೈತ್ರಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಫೋಟೋ, ವಿಡಿಯೋ ಕ್ಲಿಕ್ಕಿಸಲು ಮತ್ತೆ ಮತ್ತೆ ಪೋಸ್ ಕೊಡಲು ಹೇಳಿದರು. ಅಲ್ಲಾ ಆ ಮುದ್ದು ಜೋಡಿಯ ತುಂಟಾಟ ಮತ್ತೆ ಮತ್ತೆ ನೋಡಲೆಂದು ಹೇಳಿದರೋ ಅನ್ನುವಂತಿತ್ತು. ನಾನಾ ಭಂಗಿಯ ಫೋಟೋ ಶೂಟ್ ಮಾಡಿ ಮುಗಿಯುವ ಮುನ್ನವೇ ಪುರೋಹಿತರು ಕರೆದಿದ್ದರು.ಮಹಾಲಕ್ಷ್ಮಿ ಅಮ್ಮ ದೂರದಿಂದಲೇ ನೋಡಿ ತನ್ನ ಮೊಮ್ಮಗಳು ಯಾವತ್ತು ಹೀಗೆ ಚೆನ್ನಾಗಿರಲಿ ಎಂದು ಹಾರೈಸಿದರು.
ವಧು-ವರರನ್ನು ಮದುವೆ ಮಂಟಪಕ್ಕೆ ಕರೆದೊಯ್ದು ಕುಳ್ಳಿರಿಸಿದರು. ಬಂದವರೆಲ್ಲ ಆಶೀರ್ವದಿಸಲು ಆರಂಭಿಸಿದರು..ಹಾರೈಸಲು ಜನರ ಉದ್ದದ ಸಾಲೇ ನಿಂತಿತ್ತು. ಸಹಸ್ರಾರು ಜನ ಬಂದು ಮಂತ್ರಾಕ್ಷತೆ ಹಾಕಿ ವಧು-ವರರನ್ನು ಆಶೀರ್ವದಿಸಿ.. ಮಾಷ್ಟ್ರ ಮಗಳ ಮದುವೆ ಎಂದು ಊರ ಜನರು ಅನೇಕರು ಆಗಮಿಸಿದ್ದರು. ನೆಂಟರಿಷ್ಟರು ಬಂಧು-ಬಳಗ ದೊಡ್ಡದಾಗಿಯೇ ಇತ್ತು. ಮೈತ್ರಿ ಕಿಶನ್ ಇಬ್ಬರ ಸ್ನೇಹಿತರ ಪಡೆಯೂ ಆಗಮಿಸಿತು .
ಶಶಿ ತನ್ನ ಮಗನಲ್ಲಿ ವೇಗವಾಗಿ ಕಾರು ಚಲಾಯಿಸಲು ಹೇಳಿದಳು. ವೆಂಕಟ್ ಸತತ ಕೆಲವು ದಿನಗಳಿಂದ ಯಕ್ಷಗಾನದ ಭಾಗವತಿಕೆಗೆ ರಾತ್ರಿ ತೆರಳುತ್ತಿದ್ದುದರಿಂದ ಎಂಜಿನ್ ಸಮಸ್ಯೆಯಿದ್ದ ಕಾರಿನ ಕಡೆ ಅವನು ಅಷ್ಟು ಗಮನ ಕೊಟ್ಟಿರಲಿಲ್ಲ. ಇಂದಿನ ಅವನ ಫಾಸ್ಟ್ ಡ್ರೈವಿಂಗ್ ಗೆ ಮಾತ್ರ ಕಾರು ಸಹಕರಿಸಲಿಲ್ಲ. ಏನೋ ಅಡೆತಡೆ ಇದ್ದಂತೆ ಭಾಸವಾಗುತ್ತಿತ್ತು. ಕೆಲವು ಕಿಲೋಮೀಟರ್ ದೂರಸಾಗಿದಾಗ ಅಲ್ಲೇ ನಿಂತು ಬಿಟ್ಟಿತು. ಬೆಳಗಿನಿಂದ ಯಾವುದೇ ಅವಸರವಿಲ್ಲದೆ ಇದ್ದ ಶಶಿಗೆ ಮಾತ್ರ ಈಗ ಭಾರಿ ಅವಸರವಾಯಿತು."ನೋಡೋಣ.. ನಮಗೇನಾದರೂ ರಿಪೇರಿ ಮಾಡಲಾಗುತ್ತದೆಯೇ.. ಎಂದು" ಪ್ರಯತ್ನಿಸಿ ನೋಡಿದ ವೆಂಕಟ್ .ಅವನಿಂದ ಸಾಧ್ಯವಾಗದೆ ಮೆಕ್ಯಾನಿಕ್ ಗೆ ಕರೆ ಮಾಡಿದ. ಶಶಿ ಗಂಡನಲ್ಲಿ "ನಾವು ಬೇರೆ ವಾಹನ ಮಾಡಿ ಹೋಗೋಣ" ಎಂದು ದುಂಬಾಲು ಬಿದ್ದಳು. ಶಂಕರ ರಾಯರು"ಸಮಯಕ್ಕಾಗುವಾಗ ಹೊರಟರೆ ಹೀಗೇ ಆಗುವುದು "ಎಂದು ಗದರಿಸಿ ಆಕೆಯನ್ನು ಬಾಯಿ ಮುಚ್ಚಿಸಿದರು. ಏನೋ ಮಾಡಲು ಹೋಗಿ ಇನ್ನೇನೋ ಆಗಿದ್ದು ಶಶಿಗೆ ಮಾತ್ರ ಕಣ್ಣು ತುಂಬಿ ಬರುವಂತಾಯಿತು. ಅಂತೂ ಒಂದು ಗಂಟೆ ಸತತ ಪ್ರಯತ್ನದಿಂದ ಕಾರು ಸರಿಯಾಗಿ ಮತ್ತೆ ಪ್ರಯಾಣ ಮುಂದುವರಿಸಿದರು.ಶಾಸ್ತ್ರಿ ನಿವಾಸ ತಲುಪುವಾಗ ಹನ್ನೆರಡುವರೆ ಆಗಿತ್ತು.ವಿವಾಹದ ಕಾರ್ಯಕ್ರಮ ಮಂತ್ರಾಕ್ಷತೆ ಹಾಕಿ ಆಶೀರ್ವಾದ ಮಾಡುವ ಕಾರ್ಯಕ್ರಮ ಎಲ್ಲವೂ ಮುಗಿದು ಹೋಮಕ್ಕೆ ತೆರಳಿದ್ದರು ವಧೂ-ವರರು.
ಶಶಿ ಅಷ್ಟು ತಡವಾಗಿ ಬಂದದ್ದನ್ನು ಕಂಡ ಮಹಾಲಕ್ಷ್ಮಿಅಮ್ಮ ಮಗಳನ್ನು "ಏನು..ಆರಾಮವಾ.."ಎಂದಷ್ಟೇ ಕೇಳಿದರು..ಹೆಚ್ಚು ಉಪಚರಿಸುವ ಗೋಜಿಗೆ ಹೋಗಲಿಲ್ಲ.ಮಗ ಹಾಗೂ ಗಂಡನ ಎಚ್ಚರಿಕೆಯ ನುಡಿಗಳಿಂದ ಸ್ವಲ್ಪಮಟ್ಟಿಗೆ ಎಚ್ಚೆತ್ತುಕೊಂಡಿದ್ದರು ಮಹಾಲಕ್ಷ್ಮಿ ಅಮ್ಮ. ಶ್ಯಾಮ ಶಾಸ್ತ್ರಿಗಳು ,ಭಾಸ್ಕರ ಶಾಸ್ತ್ರಿಗಳು ,ಮಂಗಳಮ್ಮ "ಏನು ..ಸಾವಕಾಶವಾಗಿ ಬಂದಿರಾ.. ಬಾಯಾರಿಕೆ ಆಯ್ತಾ.." ಎಂದು ಚುಟುಕಾಗಿ ವಿಚಾರಿಸಿಕೊಂಡರು. ಶಶಿಗೆ ಅಮ್ಮನ ಅಸಡ್ಡೆ ಮಾತ್ರ ಸಹಿಸುವುದು ಕಷ್ಟವಾಯಿತು. ತನ್ನ ಕೊಂಕು ಇದುವರೆಗೆ ಅಮ್ಮನಿಗೆ ತಿಳಿಯುತ್ತಿಲ್ಲ ಎಂದುಕೊಂಡಿದ್ದ ಅವಳಿಗೆ ಈಗ ಉಲ್ಟಾ ಹೊಡೆದರು ಅಮ್ಮ..ಅದಕ್ಕಿಂತ ಹೆಚ್ಚು ಬೇಸರದ ಸಂಗತಿ ಎಂದರೆ ಅವಳ ನಾದಿನಿ ಹಾಗೂ ಓರಗಿತ್ತಿ ಶಶಿಗಿಂತ ಮೊದಲೇ ತಲುಪಿ "ನಿನ್ನ ತವರಿಗೆ ನೀನು ಇಷ್ಟು ಲೇಟ್ ಆಗಿ ಬರುವುದಾ..?" ಎನ್ನುವಂತೆ ಚುಚ್ಚಿನುಡಿದುದು.
ಎಲ್ಲರಿಗೂ ಸಾವಕಾಶವಾಗಿ ಭೋಜನದ ಮಾಡುವ ವ್ಯವಸ್ಥೆ ಮಾಡಲಾಯಿತು. ಪಂಕ್ತಿ ಹಾಗೂ ಬಫೆ ಎರಡೂ ವ್ಯವಸ್ಥೆಯನ್ನು ಮಾಡಿದ್ದರು. ಅತ್ಯಂತ ಅಚ್ಚುಕಟ್ಟುತನದಿಂದ ಕಾರ್ಯನಿರ್ವಹಿಸುತ್ತಿದ್ದರು ನೆರೆಹೊರೆಯ ಬಂಧುಗಳು.ಶಾಸ್ತ್ರಿಗಳು ಕೂಡ ಯಾವುದೇ ಹಮ್ಮುಬಿಮ್ಮು ಇಲ್ಲದೆ ಅವರುಗಳ ಮನೆಯಲ್ಲಿ ಕಾರ್ಯಕ್ರಮವಿದ್ದರೆ ತಾನು ಸಹಕರಿಸುತ್ತಿದ್ದರು. ಹಳ್ಳಿಯ ಈ ಸಹಕಾರಿ ವ್ಯವಸ್ಥೆ ಎಲ್ಲರಿಗೂ ಬಹಳ ಮೆಚ್ಚುಗೆಯಾಯಿತು. ಒಂದಾದ ಮೇಲೆ ಒಂದು ಪಾಕಗಳನ್ನು ಶಿಸ್ತುಬದ್ಧವಾಗಿ ಬಡಿಸುತ್ತಿದ್ದರು.ಹದವಾಗಿ ಬಾಡಿಸಿದ ಬಾಳೆಎಲೆ.. ಅದರ ಮೇಲೆ ಕ್ರಮಬದ್ಧವಾಗಿ ಪಡಿಸುತ್ತಿರುವ ಪಲ್ಯಗಳು ,ಉಪ್ಪಿನಕಾಯಿ, ಮೆಣಸ್ಕಾಯಿ... ಎಲ್ಲವೂ ಬಾಳೆಎಲೆಗೆ ಶೋಭೆಯನ್ನು ತಂದಿತ್ತು.
ಪುರೋಹಿತರು ಮಂತ್ರಘೋಷಗೈದರು. ಮಂಗಳಮ್ಮ ಹಾಗೂ ಭಾಸ್ಕರ ಶಾಸ್ತ್ರಿಗಳು "ಶ್ರೀಕೃಷ್ಣಾರ್ಪಣಮಸ್ತು" ಅಂತ ಅನ್ನುತ್ತಾ ನಮಸ್ಕರಿಸಿದಾಗ ಊಟ ಆರಂಭವಾಯಿತು.
ಎಲೆಯ ಮೇಲೆ ಎಷ್ಟೇ ರುಚಿಕರವಾದ ಪದಾರ್ಥಗಳನ್ನು ಬಡಿಸಲಿ ಯಾರೊಬ್ಬರೂ ಅದನ್ನು ಹಾಗೆ ರುಚಿನೋಡುವುದಾಗಲೀ , ಉಣ್ಣುವುದಾಗಲಿ ಮಾಡುವುದಿಲ್ಲ. ಪುರೋಹಿತರ ಮಂತ್ರ ಘೋಷಗಳ ನಂತರ ಮನೆಯವರು ಹಸ್ತೋದಕ ನೀಡಿ ಉಂಟುಮಾಡಬಹುದು ಎಂದಾಗ ಮಾತ್ರ ಊಟ ಆರಂಭ ಮಾಡುವುದು.. ಎಷ್ಟು ಸುಂದರ ಪದ್ಧತಿ...ಬಾಳೆಎಲೆಯಲ್ಲಿ ರುಚಿಯಾದ ಪಾಕಗಳನ್ನು ಕಂಡಾಗ ಎಂತಹ ಹಸಿವಿಲ್ಲದವನಿಗೆ ಕೂಡ ಹಸಿವೆ ಆರಂಭವಾಗುತ್ತದೆ .ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ಈ ಜೊಲ್ಲು ಸುರಿಸುವಿಕೆಯಿಂದ ಹಸಿವೆ ಜಾಸ್ತಿಯಾಗಿ ಆಹಾರ ರುಚಿಸುತ್ತದೆ..ಉಂಡ ಆಹಾರ ಬಹಳ ಬೇಗ ಜೀರ್ಣವಾಗುತ್ತದೆ.. ಇದೆಲ್ಲಾ ಹಿಂದಿನಿಂದಲೇ ಬಂದಂತಹ ಬಹಳ ಒಳ್ಳೆಯ ಪದ್ಧತಿಗಳು. ಇಂದು ಬಫೆ ಪದ್ಧತಿ ಬಂದರೂ ಸಂಪೂರ್ಣವಾಗಿ ತೆರೆಮರೆಗೆ ಸರಿದಿಲ್ಲ.
ಮೊದಲಿಗೆ ಬಾಳೆಎಲೆಯ ಬಲಭಾಗದಲ್ಲಿ ನೇಂದ್ರ ಬಾಳೆಹಣ್ಣಿನ ಪಾಯಸ ಸವಿದ ಮೇಲೆ ಅನ್ನದ ಬಲ ಬದಿಯಲ್ಲಿ ಘಮಘಮಿಸುವ ಬಡಿಸಲಾಗಿತ್ತು. ಘಮಘಮಿಸುವ ತುಪ್ಪದೊಂದಿಗೆ ಹಲಸಿನಕಾಯಿ ಪಲ್ಯವನ್ನು ಸೇರಿಸಿ ಊಟ ಆರಂಭಿಸಿದರು. ದೂರದಿಂದಲೇ ಮೂಗಿಗೆ ಬಡಿಯುತ್ತಿದ್ದ ಸಾರಿನ ಘಮ ವರ್ಣಿಸಲು ಸಾಧ್ಯವಿಲ್ಲ. ಸಾರಿನ ಒಗ್ಗರಣೆಗೆ ಬಳಸುವ ಇಂಗಿನ ಘಮವೋ.. ಅಲ್ಲ ಮಸಾಲೆ ಹುರಿಯುವ ಶೈಲಿಯೋ.. ಅಂತೂ ಅಡಿಗೆ ಕಿಟ್ಟಣ್ಣನ ಸಾರು ಉಂಡರಂತೂ ರಾತ್ರಿಯವರೆಗೂ ಕೈಯಿಂದ ಪರಿಮಳ ಹೋಗದು.
ನೇಂದ್ರ ಬಾಳೆಹಣ್ಣಿನ ಪಾಯಸದೊಂದಿಗೆ ಸಾಥ್ ಕೊಟ್ಟಿದ್ದು ರುಚಿಕರವಾದ ಹೆಸರುಬೇಳೆ ಪಾಯಸ.ಜತೆಗೆ ರುಚಿಕರವಾದ ಹೋಳಿಗೆ.. ಅದರ ಮೇಲೆ ತುಪ್ಪ, ತೆಂಗಿನಕಾಯಿ ಹಾಲು ಜೊತೆಜೊತೆಗೆ ಬಂದಿತ್ತು. ಕರುಂ ಕುರುಂ ಪ್ರಿಯರಿಗೆ ಮಿಕ್ಸ್ಚರ್ ಇದ್ದಿತು. . ಜಿಲೇಬಿ ಬಾಯಿಯಲ್ಲಿ ಇಟ್ಟಾಗಲೇ ಕರಗುವಂತಿತ್ತು. ಮಾವಿನಕಾಯಿ ಮೆಣಸ್ಕಾಯಿ ಬಾಯಿ ಚಪ್ಪರಿಸಿ ತಿನ್ನುವಂತಿತ್ತು. ದೀಗುಜ್ಜೆ/ ದಿವಿಹಲಸು ಸಾಂಬಾರು ಎಲ್ಲರ ನಾಲಿಗೆಯನ್ನು ಮೋಡಿ ಮಾಡಿತ್ತು. ಸೌತೆಕಾಯಿ ,ತೊಂಡೆಕಾಯಿ ಕಾಯಿಹುಳಿ ಸ್ವಾದಿಷ್ಟವಾಗಿತ್ತು. ಕೊನೆಗೆ ಬಂದ ಮಜ್ಜಿಗೆ ನೀರು ಊಟಕ್ಕೆ ಹಾಕಿಸಿಕೊಳ್ಳುವುದರ ಜೊತೆಗೆ ಸ್ವಲ್ಪ ಕುಡಿಯಲು ಇರಲಿ ಎಂದು ಗ್ಲಾಸ್ಗೆ ಹಾಕಿಸಿಕೊಳ್ಳುತ್ತಿದ್ದರು. ಜೊತೆಗೆ ಮೊಸರು ಬಂದಿತ್ತು. ನೆಂಚಿಕೊಳ್ಳಲು ಮಾಡಿದ್ದ ಸೊನೆ ಮಿಡಿ ಉಪ್ಪಿನಕಾಯಿ ವಾವ್..! ವಾವ್..! ಅನ್ನುವಂತಿತ್ತು. ಕರುಂ ಕುರುಂ ಅನ್ನುವ ಸಣ್ಣ ಮಿಡಿ. ನಾಲಿಗೆ ಸುಯ್.. ಅನ್ನುವಷ್ಟು ಸೊನೆ. ಇಷ್ಟಿದ್ದರೆ ಉಪ್ಪಿನಕಾಯಿ ಪ್ರಿಯರಿಗಂತೂ ನಾಲ್ಕು ತುತ್ತು ಅನ್ನ ಹೆಚ್ಚು ಉಣ್ಣಬಹುದು. . ಊಟದಲ್ಲಿ ಅತಿಯಾದ ಆಡಂಬರ,ಹೊಟ್ಟೆಯಲ್ಲಿ ಹಿಡಿಯಲಾರದಷ್ಟು ಬಗೆಗಳು ಇಲ್ಲದಿದ್ದರೂ ಎಲ್ಲವೂ ಹವ್ಯಕರ ಸಾಂಪ್ರದಾಯಿಕ ರೀತಿಯಲ್ಲಿ ..ಹಳ್ಳಿಯಲ್ಲಿ ಬೆಳೆದ ಸಾವಯವ ತರಕಾರಿಯಿಂದ ತಯಾರಿಸಿದವು. ತಾಜಾ ತರಕಾರಿಗಳು ಅಡುಗೆಯ ರುಚಿ ಹೆಚ್ಚಿಸಿದ್ದವು.
ಊಟ ಮಾಡಿ ಕೈ ತೊಳೆದ ಮೇಲೆ ಮತ್ತೆ ಮತ್ತೆ ಮೂಗಿಗೆ ಹಿಡಿದು ಮೂಸುವಂತಹ ಘಮವಿತ್ತು ಊಟಕ್ಕೆ.ಊಟದ ಮಧ್ಯದಲ್ಲಿ ವಧೂವರರಿಂದ ಚೂರ್ಣಿಕೆ, ಯಕ್ಷಗಾನದ ಪದಗಳು, ಶ್ಲೋಕಗಳು ಕರ್ಣಾನಂದವನ್ನು ಉಂಟುಮಾಡಿದವು.ಊಟ ಮುಗಿಯುತ್ತಿದ್ದಂತೆ ಕೆಲವರಂತೂ ಅಡುಗೆ ಮನೆಗೆ ಬಂದು ಅಡುಗೆ ಮಾಡುವ ಕಿಟ್ಟಣ್ಣನಲ್ಲಿ ಉಪ್ಪಿನಕಾಯಿ ಹೇಗೆ ತಯಾರಿಸಿದ್ದು ಎಂದು ಕೇಳುತ್ತಿದ್ದರು. ಕೆಲವರಂತೂ ಮಂಗಳಮ್ಮ ನಲ್ಲಿ ನಮಗೂ ಒಂದು ಚೂರು ಬಾಕ್ಸ್ ನಲ್ಲಿ ಹಾಕಿ ಕೊಡಿ ಎನ್ನುತ್ತಿದ್ದರು.ಮೈತ್ರಿಯ ಗೆಳತಿ ಸುನಿಧಿ ಹೊರಡುವ ಮುನ್ನ ಮೈತ್ರಿಯ ಕಿವಿಯಲ್ಲಿ "ನಿಮ್ಮದು ಲವ್ಲೀ ಪೇರ್ ಕಣೇ.. ಮದುವೆಯ ಅಡುಗೆಯೂ ಸೂಪರ್.. ಅದರಲ್ಲಿ ಉಪ್ಪಿನಕಾಯಿ ಅಂತೂ ವಾವ್ ವಾವ್.. !! "ಎಂದುಸುರಿ ತನ್ನ ಗಂಡನ ಕೈ ಹಿಡಿದು ಹೊರಟಿದ್ದಳು.
ಸಹಸ್ರಾರು ಜನ ಬಂದು ಊಟ ಮಾಡಿ ತೆರಳಿದರು. ಸಮಯವಾಗುತ್ತಿದ್ದಂತೆ ಜನ ಖಾಲಿಯಾಗುತ್ತಾ ಒಂದು ಅತಿ ಹತ್ತಿರದ ನೆಂಟರು ಮಾತ್ರ ಉಳಿದುಕೊಂಡಿದ್ದರು.ಕಿಶನ್ ಕಡೆಯವರು ಅವನನ್ನು ಬಿಟ್ಟು ಮತ್ತೆಲ್ಲರೂ ತೆರಳಿದರು.ಮಮತಾ ಹೋಗುವ ಮುನ್ನ "ಕಿಶನ್.. ನಾಳೆ ಸೊಸೆಯನ್ನು ಕರೆದುಕೊಂಡು ಬಾ .." ಎಂದು ಹೇಳಿ ಕಣ್ಣಲ್ಲಿ ಮಗನಿಗೆ ಶುಭಹಾರೈಸಿದರು. ಮೇದಿನಿ ಮೆಲ್ಲ ಅಣ್ಣನ ಪಕ್ಕ ಬಂದು "ಆಲ್ ದಿ ಬೆಸ್ಟ್ ಕಣೋ" ಎನ್ನುತ್ತಾ "ನಾಳೆ ಸಿಗೋಣ" ಅಂದಳು.
ಚಾಂದಿನಿ "ಅಣ್ಣಾ..ರಾತ್ರಿ ಚೆನ್ನಾಗಿ ನಿದ್ದೆ ಮಾಡು ಆಯ್ತಾ..." ಎಂದರೆ ಭಾವ " ನಿದ್ದೆ ಮಾಡಬೇಡಿ.. ನೈಟ್ ಡ್ಯೂಟಿ ಮಾಡಿ. ..ನಿದ್ದೆ ಮನೆಗೆ ಬಂದ ಮೇಲೆ ಮಾಡಬಹುದು.." ಎಂದು ಛೇಡಿಸಿದರು. ಎಲ್ಲದಕ್ಕೂ ಕಿಶನ್ ಮೈತ್ರಿಯ ನಗುವೇ ಉತ್ತರವಾಗಿತ್ತು.
ಮುಂದುವರೆಯುವುದು....
✍️...ಅನಿತಾ ಜಿ.ಕೆ .ಭಟ್.
15-05-2020.
ಮದುವೆಗೆ ಹೋಗಿ ಬಂದ ಹಾಗಾಯಿತು...
ReplyDeleteಥ್ಯಾಂಕ್ಯೂ 💐🙏
DeleteMaduve laikili kaludathu..innu naalange sattumudi ondu kalishikki naavu namma manege...
ReplyDelete🤩🤩ಥ್ಯಾಂಕ್ಯೂ 💐🙏
Delete