ಜೀವನ ಮೈತ್ರಿ ಭಾಗ ೭೮
ಸಂಜೆಯ ಹೊತ್ತಿನಲ್ಲಿ ಕಿಶನ್ ಮೈತ್ರಿ ಇಬ್ಬರೂ ತಂಪಾದ ಅಡಿಕೆ ತೋಟದಲ್ಲಿ ವಿಹರಿಸಿದರು. ನಾಲ್ಕು ವರ್ಷದ ವಿರಹವು ತಣಿಯುವ ಹಂತದಲ್ಲಿತ್ತು. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುತ್ತಾ, ಕೀಟಲೆ ಮಾಡುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ. ಮನೆಗೆ ಬಂದಾಗ ಮಂಗಳಮ್ಮ ಮಗಳು ಅಳಿಯನಿಗೆ ಸ್ನಾನ ಮಾಡಿ ಬರಲು ಹೇಳಿದರು. ಮಂಗಳಮ್ಮ ದೇವರ ದೀಪ ಹಚ್ಚಿದರು.ದೀಪದ ಮುಂದೆ ಕುಳಿತು ಭಕ್ತಿಗೀತೆಗಳನ್ನು ಹೇಳಲು ಮಗಳಲ್ಲಿ ಹೇಳಿದರು. ಮೈತ್ರಿ ದೇವರ ನಾಮಗಳನ್ನು ಹಾಡುತ್ತಿದ್ದಂತೆ ಆಕೆಯ ಸುಶ್ರಾವ್ಯ ಕಂಠಕ್ಕೆ ಮನೆಯಲ್ಲಿ ಉಳಿದುಕೊಂಡಿದ್ದ ನೆಂಟರೆಲ್ಲರೂ ಕಿವಿಯಾದರು...ತಲೆದೂಗಿದರು... ಕಿಶನ್ ತಾನೇನು ಕಮ್ಮಿಯಿಲ್ಲ ಎಂಬಂತೆ ಒಂದೆರಡು ದೇವರನಾಮದ ತುಣುಕುಗಳನ್ನು ಹಾಡಿದ. ಅದು ಮುಗಿಯುತ್ತಿದ್ದಂತೆ ಶ್ಯಾಮಶಾಸ್ತ್ರಿಗಳು ಅವನಿಗೆ ಸಂಧ್ಯಾವಂದನೆಗೆ ಏರ್ಪಾಡು ಮಾಡಿದರು.ಅಜ್ಜ ಹೇಳಿದ ಮೇಲೆ ಮಾಡಲೇಬೇಕಲ್ಲ .. ಸಂಧ್ಯಾವಂದನೆ ಮುಗಿಸಿ ಹೊರಬಂದ.
ಭಾಸ್ಕರ ಶಾಸ್ತ್ರಿಗಳು ಒಂದಷ್ಟು ಹೊತ್ತು ಅಳಿಯನಲ್ಲಿ ಮದುವೆಯ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದರು.ಹೆಣ್ಣುಮಕ್ಕಳೆಲ್ಲ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು.ಸಂಜನಾ ವಂದನಾಗೆ ಇವತ್ತು ಅಕ್ಕನ ಜೊತೆಯಿಲ್ಲದೆ ಬೋರ್ ಆಗುತ್ತಿತ್ತು.ಅಕ್ಕ ಭಾವನಿಗಂಟಿಕೊಂಡಿದ್ದುದರಿಂದ ತಮ್ಮ ಮಹೇಶನೇ ಇಂದು ಫ್ರೆಂಡ್ ಆಗಿದ್ದ.ಗಾಯತ್ರಿ ಮನೆಯ ಕೆಲಸಕಾರ್ಯಗಳಲ್ಲಿ ಅಕ್ಕನೊಂದಿಗೆ ಕೈಜೋಡಿಸಿದರು.
ಮಹಾಲಕ್ಷ್ಮಿ ಅಮ್ಮ ಎಲ್ಲರನ್ನೂ ಊಟಕ್ಕೆ ಕರೆದರು.ಗಾಯತ್ರಿ ,ಮಂಗಳಮ್ಮ ,ಸಂಜನಾ ವಂದನಾ ಬಡಿಸಿದರು.ಊಟಕ್ಕೆ ಕುಳಿತಿದ್ದ ಕಿಶನ್ ಮೈತ್ರಿಗೆ ಒತ್ತಾಯ ಮಾಡಿ ಹೆಸರು ಪಾಯಸ, ಹೋಳಿಗೆ ಬಡಿಸಿದರು ಅಜ್ಜಿ.."ನನಗೆ ಇಷ್ಟೆಲ್ಲಾ ತಿನ್ನಲಾಗುವುದಿಲ್ಲ" ಎಂದು ಮೂತಿ ಊದಿಸಿದಳು ಮೈತ್ರಿ."ಇವತ್ತು ತಿನ್ನದಿದ್ದರೆ ಹೇಗೆ..ಪುಳ್ಳಿ.." ಎಂದು ಅತ್ತೆ ಛೇಡಿಸುತ್ತಿದ್ದರೆ ಮಂಗಳಮ್ಮ .. "ಅತ್ತೆ .. ಹಾಗೆ ಒತ್ತಾಯ ಮಾಡಿ ಬಡಿಸಬೇಡಿ .ಬೇಕಾದಷ್ಟೇ ತಿಂದರೆ ಸಾಕು.." ಎಂದರು.ಕಿಶನ್ಗೆ ಅತ್ತೆಯಾದರೂ ನಮ್ಮ ಪರವಾಗಿ ಇದ್ದಾರಲ್ಲ ಎಂದು ಖುಷಿಯಾಯಿತು.ಕಷ್ಟಪಟ್ಟು ಉಂಡೆದ್ದರು ಮೈತ್ರಿ ಮತ್ತು ಕಿಶನ್.
ಮಂಗಳಮ್ಮ ಮಗಳನ್ನು ಕರೆದರು. ಹಾಲಿನ ಲೋಟವನ್ನು ಕೈಗಿತ್ತು "ಕಿಶನ್ ರೂಮಿನಲ್ಲಿದ್ದಾನೆ.. ಹೋಗು" ಅಂದರು..ಆಕೆ ತಲೆತಗ್ಗಿಸಿ ತನ್ನ ರೂಮಿನತ್ತ ಸಾಗುತ್ತಿದ್ದರೆ ಅಲ್ಲಿ ಕುಳಿತಿದ್ದ ಮಹೇಶ್ ,ಸಂಜನಾ, ವಂದನಾಗೆ ನಗು ತಡೆಯಲಾಗಲಿಲ್ಲ... ಮುಖಭಂಗವಾದಂತಾದ ಮೈತ್ರಿ ವಾಪಾಸಾಗುತ್ತಿರುವಾಗ "ನೀನು ಅಲ್ಲಿಗೇಕೆ ಹೋದೆ.ನಾನಿಲ್ಲಿದ್ದೇನೆ...."ಅನ್ನುವ ಮುಖಭಾವ ಹೊತ್ತು ನಸುನಗುತ್ತಾ ನಿಂತಿದ್ದ ಕಿಶನ್.ಚಾವಡಿಯ ಇನ್ನೊಂದು ಮಗ್ಗುಲಲ್ಲಿ ಇದ್ದ ಅಪ್ಪ ಅಮ್ಮ ಮಲಗುತ್ತಿದ್ದ ಕೋಣೆಯನ್ನು ಮಗಳು ಅಳಿಯನಿಗಾಗಿ ಸಿದ್ಧಪಡಿಸಿದ್ದರು.
ಕ್ಷೀರಕನ್ನಿಕೆ ಈಗ ತನ್ನ ನಡೆಯಿಂದ ನಾಚಿ ಕೆಂಪಾಗಿದ್ದಳು.ಇನಿಯನ ಸನಿಹ ಮತ್ತಷ್ಟು ರಂಗೇರುವಂತೆ ಮಾಡಿತ್ತು.ಹಾಲನ್ನು ಪಡೆದ ಕಿಶನ್ ಮೊದಲು ತನ್ನವಳ ತುಟಿಗಿರಿಸಿ ನಂತರ ತಾನು ಸ್ವೀಕರಿಸಿದ..ಅವಳ ಕಣ್ಣುಗಳಲ್ಲಿದ್ದ ಮಾಧುರ್ಯ ಅವನ ಹೃದಯದಲ್ಲಿ ಹೊಸ ಕಂಪನವನ್ನುಂಟು ಮಾಡಿತು.ಪತಿಯ ಪ್ರೇಮದಝರಿಯಲ್ಲಿ ಕೊಚ್ಚಿಹೋದಳು.ಅಧರವು ಸಿಹಿಯ ಹಂಚಿಕೊಂಡು ಮೈಮರೆಯಿತು.ಚುಕ್ಕಿತಾರೆಗಳ ಮಂದ ಬೆಳಕಿನಲ್ಲಿ ಬಾಹುಬಂಧನದ ತಂಪು ಮುದಗೊಳಿಸಿತು. ಅವನೊಲವಿನ ಶರಧಿಯಲಿ ಬಳುಕುವ ಮೀನಾದಳು ಅವಳು.ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವೆನೆಂಬ ಭರವಸೆಯ ನುಡಿಗಳಿಗೆ ಉತ್ತರವಾಗಿ ಅವನ ಪ್ರೇಮ ಪಲ್ಲಕ್ಕಿಯಲ್ಲಿ ಮೆರೆಯುವ ಯುವರಾಣಿಯಾದಳು.ಇಬ್ಬರ ನಡುವೆ ಪಿಸುಮಾತಿಗೂ ಮೌನದ ಬೇಲಿಭದ್ರವಾಗಿತ್ತು.ಮೌನವು ಮಾತುಗಳನ್ನು ಮೀರಿದ ಭಾವಾಭಿವ್ಯಕ್ತಿಯ ಪ್ರಬಲ ಸೇತುವಾಯಿತು.ಮಾತಿಗೆ ಮಾತು ಬೆಳೆಸಿದ ಪ್ರೀತಿಗೆ ಸೋತು ಮೌನಕ್ಕೆ ಮನವು ಶರಣಾಯಿತು.ಸೋಲುವುದರಲ್ಲೂ ಗೆಲುವಿದೆ..ಆ ಗೆಲುವಿನಲ್ಲಿ ಬದುಕಿನ ಪಯಣದ ನಂಟಿದೆ.ಜೊತೆಯಾಗಿ ಸಾಗುವ ಬಾಳಿನ ತೆಪ್ಪದಲ್ಲಿ ಒಪ್ಪಿತವಾದ ಮೊದಲ ಶುಭಮಿಲನದ ಸುಮಧುರ ಘಳಿಗೆಗೆ ಜೋಡಿ ಪ್ರೇಮಹಕ್ಕಿಗಳು ರುಜುಹಾಕಿದವು.
ಬೆಳ್ಳಂಬೆಳಗ್ಗೆ ಏಳಬೇಕಾಗಿದ್ದರಿಂದ ರಾತ್ರಿಯೇ ಅಲಾರಾಂ ಇಟ್ಟಿದ್ದರು.ಅಲರಾಂ ಬೊಬ್ಬಿರಿದಾಗ ಇಷ್ಟು ಬೇಗ ಬೆಳಗಾಯಿತಾ .. ಎಂಬಂತೆ ಭಾಸವಾಯಿತು..ಪತಿಯ ಕಚಗುಳಿಯ ಸಹಿಸಿ ..ತಾನೇನು ಸುಮ್ಮನಿರಲಾರೆ ಎನ್ನುತ್ತಾ ಅವನ ಗಲ್ಲಹಿಂಡಿ ಎದ್ದಳು.ಪತ್ನಿಯನ್ನು ಹಿಂಬಾಲಿಸಿದ ಪತಿ.
ಹೊರಬರುತ್ತಿದ್ದಂತೇ ಎದುರಾದದ್ದು ಭಾಸ್ಕರ ಶಾಸ್ತ್ರಿಗಳು.."ನಿದ್ದೆ ಬಂತಾ ಅಳಿಯಂದಿರೇ..?" ಅಂದಾಗ ಏನು ಹೇಳಬೇಕೆಂದೇ ತೋಚದೆ ಅಡ್ಡಡ್ಡ ಉದ್ದುದ್ದ ತಲೆಯಾಡಿಸಿದ್ದ ಕಿಶನ್.. ಪ್ರಶ್ನೆ ಅನಿರೀಕ್ಷಿತವಾಗಿತ್ತು..ಅದೂ ಶಿಸ್ತಿನ ಸಿಪಾಯಿ ಮಾವನಿಂದ..!!
ಬಚ್ಚಲು ಮನೆಯ ಕಡೆಗೆ ಹೋಗುತ್ತಿದ್ದಂತೆ ಮಂಗಳಮ್ಮ "ಆರಾಮ ತಾನೇ..?" ಎಂದರು ಮಗಳನ್ನು ನೋಡಿ..ಹಿಂದಿದ್ದ ಕಿಶನ್ ಏನೂ ಅರಿಯದವನಂತೆ ಮುಗ್ಧತೆಯ ಮುಖವಾಡ ಹೊತ್ತು ನಿಂತಿದ್ದ.
ಕಿಶನ್ ಸ್ನಾನ ಮಾಡಿ ಬಂದಾಗ ಮಂಗಳಮ್ಮ ಮಗಳು ಅಳಿಯನಿಗೆ ಬಿಸಿ ಬಿಸಿ ಕಾಫಿ ಮಾಡಿ ತಂದಿದ್ದರು.ಮೈತ್ರಿಯಲ್ಲಿ ಕೊಟ್ಟು "ಅಳಿಯಂದಿರಿಗೆ ನೀನೇ ಕೈಯಾರೆ ಕೊಡು.ಪತ್ನಿ ಕೊಟ್ಟರೆ ಸ್ವಾದ ಹೆಚ್ಚು" ಅಂದಾಗ ಇಬ್ಬರ ಕೆನ್ನೆಯೂ ರಂಗೇರಿ ಕಣ್ಣಿನ ನಡುವಿನ ತುಂಟಾಟದಲ್ಲಿ ಮಂಗಳಮ್ಮ 'ದಾಂಪತ್ಯದ ಸವಿಯುಂಡ ಜೋಡಿಯಿದು' ಎಂದು ಸಂತೃಪ್ತರಾದರು.
ಶ್ಯಾಮ ಶಾಸ್ತ್ರಿಗಳು ಆಗಲೇ ಹೊರಟು ಸಿದ್ಧವಾಗಿದ್ದರು.ಅಡಿಗೆ ಕಿಟ್ಟಣ್ಣ ಎಲ್ಲರಿಗೂ ತಿಂಡಿ ಕಾಫಿ ತಯಾರಾಗಿದೆ ಎಂದರು.ತಿಂಡಿ ಸವಿದು ಎಲ್ಲರೂ ಹೊರಟಾಗ ಮನೆಯಂಗಳದಲ್ಲಿ ಬಸ್, ಕಾರು,ಜೀಪು ಬಂದು ನಿಂತಿತು...ನಂತರ ವಧೂವರರ ದಿಬ್ಬಣ ಕಿಶನ್ ನ ಮನೆಯತ್ತ ಸಾಗಿತು.ಮಗಳಂದಿರಲ್ಲಿ ಶಶಿಯನ್ನು ಬಿಟ್ಟು ಮತ್ತೆಲ್ಲರೂ ಇದ್ದರು.ಮಂಗಳಮ್ಮನ ತವರು ಮನೆಯವರೂ ಇದ್ದರು.ಪ್ರತಿಬಾರಿ ದಾರಿ ಮಧ್ಯೆ ಶಶಿ ಸಿಗುತ್ತಾಳೋ ಎಂದು ಕತ್ತು ಉದ್ದ ಮಾಡುತ್ತಿದ್ದ ಮಹಾಲಕ್ಷ್ಮಿ ಅಮ್ಮ ಇಂದು ಮಾತ್ರ ಅವಳ ಉಸಾಬರಿಗೇ ಹೋಗಲಿಲ್ಲ.ತನ್ನ ಪ್ರೀತಿಯ ಮಗಳ ನಡತೆ ಅವರಿಗೆ ಬಹಳ ನೋವು ತಂದಿತ್ತು.
ಏಳು ಗಂಟೆಯ ಹೊತ್ತಿಗೆ ಗಣೇಶ ಶರ್ಮನ ಮನೆ ತಲುಪಿತು ವಧೂವರರ ದಿಬ್ಬಣ. ಬರಮಾಡಿಕೊಳ್ಳಲು ನೆಂಟರ ಗಡಣವೇ ನೆರೆದಿತ್ತು.ಕೈಕಾಲು ತೊಳೆದುಕೊಳ್ಳಲು ನೀರು ಕೊಡಲು ಬಂದಿದ್ದ ಮೇದಿನಿ ಅಣ್ಣ ಅತ್ತಿಗೆಯ ಪಕ್ಕ ಬಂದು ನೀರಿನ ಚೊಂಬು ಕೊಟ್ಟು " ಇಬ್ಬರ ಕಣ್ಣೂ ನಿದ್ದೆಮಾಡಿಲ್ಲ ಎಂದು ಸಾರುತ್ತಿದೆ.."ಎಂದಾಗ ಪರಸ್ಪರ ಮುಖ ನೋಡಿ ನಕ್ಕರು ವಧೂವರರು.
"ಭಾವ...ಇಷ್ಟು ದಿನ ಬಾರದ ನಿದ್ದೆಯೆಲ್ಲಾ ನಿನ್ನೆ ಬಂತಾ ಹೇಗೆ.. ದಿಬ್ಬಣ ಬರುವಾಗ ಲೇಟಾಯ್ತು.."ಎಂದರು ಮೇದಿನಿಯ ಗಂಡ..
ಚಾಂದಿನಿ ಅತ್ತಿಗೆಯ ಕಿವಿಯಲ್ಲಿ "ಅತ್ತಿಗೆ ..ನಿಮ್ಮ ತುಟಿಗಳು ಕೆಂಪಗಾಗಿವೆ ನೋಡಿ.."ಅಂದಾಗ ಮಡದಿಯ ಫಜೀತಿಯನ್ನು ನೋಡಿ 'ಏನೂ ಆಗಿಲ್ಲ.. ಸುಮ್ಮನೆ.. ' ಎಂದು ಕಣ್ಣಲ್ಲೇ ಹೇಳಿದ್ದ ಕಿಶನ್.
"ಭಾವ... ನಿನ್ನೆ ಜೋರು ಮಳೆ ಬಂದು ತಂಪಾಗಿರಬೇಕಲ್ಲ"ಅಂದಾಗ "ಇಲ್ಲಪ್ಪಾ...ಮಳೆಯೇ ಬಂದಿಲ್ಲ.."ಎಂದ ಕಿಶನ್ ಮಾತು ಕೇಳಿ ತಂಗಿಯಂದಿರು ಭಾವಂದಿರು ನಗುತ್ತಿದ್ದಾಗಲೇ ಕಿಶನ್ ಗೆ ಅರಿವಾಗಿದ್ದು ಅದು ಪ್ರೀತಿಯ ಸುರಿಮಳೆಯನ್ನು ಹೇಳಿದ್ದು ಎಂದು..
ಸಾಕಷ್ಟು ಛೇಡಿಸಿ ಕೆನ್ನೆ ಕೆಂಪಗಾಗಿಸಿ ವಧೂವರರನ್ನು ಬರಮಾಡಿಕೊಂಡರು. ಉಪಾಹಾರದ ನಂತರ ಮೈತ್ರಿಯನ್ನು ಅಲಂಕಾರ ಮಾಡಲು ರೂಮಿಗೆ ಕರೆದೊಯ್ದರು.ಗಾಯತ್ರಿ ಮೈತ್ರಿ ಸೀರೆಯುಟ್ಟದ್ದನ್ನು ಸರಿಪಡಿಸುತ್ತಿದ್ದರು.ಅವರಿಬ್ಬರ ಸರಸದ ಕುರುಹು ಕಂಡ ಗಾಯತ್ರಿ ನಸುನಕ್ಕು ಸುಮ್ಮನಿದ್ದರು.ಸಂಜನಾ .. "ಅಕ್ಕಾ.. ಇದೇನು?" ಎಂದು ಕಣ್ಣರಳಿಸಿದರೆ ಫಕ್ಕನೆ ಸೀರೆಯಲ್ಲಿ ಇನಿಯನ ಪ್ರೇಯಮುದ್ರೆಯ ಸಂಕೇತವನ್ನು ಬಚ್ಚಿಟ್ಟಳು.. !! "ಬಿಡಿ..ಚಿಕ್ಕಮ್ಮಾ..ನಾನೇ ಸೀರೆಯುಡುತ್ತೇನೆ" ಎಂದು ರೂಮಿನ ಬದಿಗೆ ತೆರಳಿ ಮರೆಯಲ್ಲಿ ತಾನೇ ಸೀರೆಯುಟ್ಟು ಬಂದಳು.
ನಿನ್ನೆಯಂತೆಯೇ ಇಂದೂ ಕೂಡ ಮಲ್ಲಿಗೆಯ ಚಂದದ ಜಡೆಯನ್ನು ಹಾಕಬೇಕು.ಅದಕ್ಕೆಂದೇ ಮಲ್ಲಿಗೆಯ ಅಟ್ಟೆ ಸಿದ್ಧವಾಗಿತ್ತು.ಸುಂದರವಾಗಿ ಗಾಯತ್ರಿ ,ಮಂಗಳಮ್ಮ ಹಿಂದಲೆಗೆ ಮಲ್ಲಿಗೆಯನ್ನು ವೃತ್ತಾಕಾರವಾಗಿ ಮುಡಿಸಿ ಜಡೆಗೂ ಸುತ್ತಿದರು.ಸಂಜನಾ ,ವಂದನಾ ನೆರವಾದರು..ನಿನ್ನೆಗಿಂತ ಇಂದು ಪತಿಯ ಪ್ರೀತಿಯಲ್ಲಿ ಮಿಂದೆದ್ದ ಮದುಮಗಳ ಮುಖಕ್ಕೆ ವಿಶೇಷ ಕಳೆ ಬಂದಿತ್ತು.ಅಲಂಕಾರ ಮುಗಿಸಿ ಹೊರಬಂದಾಗ ಪತಿ ಅವಳಿಗಾಗಿ ತಾನು ಕಚ್ಚೆಯುಟ್ಟು ಮುಂಡಾಸು ತೊಟ್ಟು ಕಾಯುತ್ತಿದ್ದರು. ಮೈತ್ರಿಯನ್ನು ಕಂಡಾಗ ರೋಮಾಂಚನಗೊಂಡ ಕಿಶನ್ ಗೆ ಗಾಯತ್ರಿ ಅತ್ತೆ "ನಿನ್ನ ಮದುಮಗಳು ಹೇಗೆ ಕಾಣಿಸುತ್ತಿದ್ದಾಳೆ ಈಗ"ಎಂದು ಕೇಳಿದಾಗ
ಅಲ್ಲೇ ಜೊತೆಯಲ್ಲಿದ್ದ ಮಂಗಳಮ್ಮ " ರೂಮಿಗೆ ಕಳಿಸಿದರೆ ಹೇಳಬಹುದು.. ಅಲ್ವಾ..ಅಳಿಯಂದಿರೇ.."ಎಂದರು..
"ಅತ್ತೇ ನೀವೂ..."
"ಹೌದು ನಂಗೂ ತಮಾಷೆ ಮಾಡಲು ಬರುತ್ತೆ.."
ನಸುನಕ್ಕ ಕಿಶನ್ "ಪುರೋಹಿತರು ಕರೆಯುತ್ತಿದ್ದಾರೆ " ಎಂದು ಹೊರಡಲನುವಾದ..
ಮಗಳ ಕೈಹಿಡಿದು ಹೋಗಲು ಅವಸರಪಡುತ್ತಿದ್ದ ಅಳಿಯನನ್ನು ಕಂಡು "ತುಂಟ ಹುಡುಗ.. ಮೈತ್ರಿ ಇನ್ನು ಯಾವತ್ತೂ ನಿನ್ನ ಜೊತೆಗೆ ಇರ್ತಾಳೆ ಕಣೋ.." ಎಂದರು ಮೆಲ್ಲನೆ.
ವಧು-ವರರು ಮಂಟಪಕ್ಕೆ ತೆರಳಿದರು. ವೈದಿಕ ಕಾರ್ಯಕ್ರಮಗಳು ಒಂದರಮೇಲೊಂದು ಜರುಗಿದವು. ನಂತರ ಮನೆಯ ಮುಖ್ಯ ಹೊಸ್ತಿಲಿನ ಮುಂದೆ ಹೊಸ್ತಿಲ ಪೂಜೆ ನೆರವೇರಿತು. ಮುದ್ದಾದ ಜೋಡಿ ಮಗ ಸೊಸೆಯನ್ನು ನೋಡಿ ಮಮತಾ ಕಣ್ತುಂಬಿಕೊಂಡರು. ತನ್ನ ಮಗಳಂತೆಯೇ ಇವಳನ್ನು ನೋಡಿಕೊಳ್ಳಬೇಕು. ಎಂದು ನಿರ್ಧರಿಸಿದರು. ಬಂದವರನ್ನೆಲ್ಲಾ ಪ್ರೀತಿಯಿಂದ ಉಪಚರಿಸುತ್ತಾ..ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತಿದ್ದರು ಮಮತಾ ಮತ್ತು ಗಣೇಶ ಶರ್ಮ.ಶಾಸ್ತ್ರಿ ನಿವಾಸದಿಂದ ಬಂದವರೆಲ್ಲರೂ ಕಿಶನ್ ಮನೆಯನ್ನು ಇಂಚಿಂಚು ಬಿಡದೇ ನೋಡಿದರು.ಮೈತ್ರಿಯ ಸೋದರತ್ತೆ ಸಾವಿತ್ರಿ ತನ್ನ ಇಬ್ಬರು ಅಕ್ಕಂದಿರಿಗೆ ಮನೆ ತೋರಿಸಿದರು. ಅವರ ನಡುವೆ ಗುಸುಗುಸು ಮಾತುಕತೆ ನಡೆಯುತ್ತಿತ್ತು.
ಗೀತಾ :-ಶಶಿಯ ಮನೆ ಇದಕ್ಕಿಂತ ಚಂದವಿತ್ತು. ಮುರಳಿ ಗುಣದಲ್ಲಿ ಒಳ್ಳೆಯವನೇ.
ಸಾವಿತ್ರಿ :- ಇಬ್ಬರೂ ಇಷ್ಟಪಟ್ಟ ಮೇಲೆ ಯಾರು ಏನು ಹೇಳಲು ಸಾಧ್ಯ.. ಒಟ್ಟಿನಲ್ಲಿ ಮುಂದೆ ಚೆನ್ನಾಗಿ ಬದುಕಿದರೆ ಸಾಕು.
ಸೀತಾ :- ಹೌದು ..ನಿನ್ನೆ ಶಶಿಯಕ್ಕ ಬರುವುದು ಬಹಳ ತಡವಾಗಿದ್ದೇಕೆ..ಇದೇ ಕಾರಣಕ್ಕೆ ಅಸಮಾಧಾನವಿತ್ತಾ..
ಗೀತಾ :- ಅವಳಿಗೆ ಸಮಾಧಾನ ಇದ್ದಂತೆ ತೋರಲಿಲ್ಲ.ಮುಖಗಂಟು ಹಾಕಿಕೊಂಡಿದ್ದಳು.ಆದರೆ ಮುರಲಿ ಮಾತ್ರ ಎಂದಿನಂತೆಯೇ ಇದ್ದ.
ಸಾವಿತ್ರಿ :- ಆಕೆ ಯಾವಾಗಲೂ ಹಾಗೆ. ಏನಾದರೊಂದು ನೆಪ ಹಿಡಿದು ಕೊಂಕು ಮಾಡುತ್ತಲೇ ಇರಬೇಕು.
ಎಂದು ಸಹೋದರಿಯರು ಮಾತನಾಡಿಕೊಂಡರು.
ಅಲ್ಲಿಗೆ ಬಂದ ಮಹಾಲಕ್ಷ್ಮಿ ಅಮ್ಮ ಅದನ್ನು ಕೇಳಿ ಮಗಳ ನಡತೆಯನ್ನು ದೂರಿದರು. ಅವರ ಮನದಾಳದ ನೋವನ್ನು ಉಳಿದ ಮಗಳಂದಿರಲ್ಲಿ ಹಂಚಿಕೊಂಡರು..
"ಆಯ್ತು ಬಿಡಿ... ಈ ಪ್ರಾಯದಲ್ಲಿ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಂಡು ಕೂರುವುದು ಬೇಡ"ಎಂದು ಮಗಳಂದಿರು ಅಮ್ಮನನ್ನು ಸಮಾಧಾನ ಪಡಿಸಿದರು.
ಅಷ್ಟರಲ್ಲಿ ಮಂಟಪದಲ್ಲಿ ಒಸಗೆ ಕಾರ್ಯಕ್ರಮ ನಡೆಯುತ್ತಿತ್ತು ಎಲ್ಲರೂ ಅಲ್ಲಿಗೆ ತೆರಳಿದರು.ಮಹಾಲಕ್ಷ್ಮಿ ಅಮ್ಮ ತಾನು ಕೊಡಬೇಕಾಗಿದ್ದುದನ್ನು ತೆಗೆದುಕೊಂಡು ಹೋಗಿ ಪತಿಯ ಜೊತೆ ನಿಂತರು.ಮೊದಲಿಗೆ ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮ ತವರಿನ ಉಡುಗೊರೆ ನೀಡಿದರು. ಮಗಳಿಗೆಂದು ತೆಗೆದ ಝರಿ ಸೀರೆಯನ್ನು ತಂದೆ ಮಗಳ ಹೆಗಲ ಮೇಲಿರಿಸಿ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು. ತಾಯಿ ಮಗಳಿಗೆ ಸುಂದರವಾದ ಚೂಡಿದಾರ್ ಒಂದನ್ನು ಉಡುಗೊರೆಯಾಗಿ ನೀಡಿದರು. ಅಳಿಯನಿಗೆ ಮಾವ ಪಂಚೆ-ಶಲ್ಯವನ್ನು ಮಾವನ ಮನೆಯ ಗೌರವದ ಉಡುಗೊರೆಯಾಗಿ ನೀಡಿದರು. ಮಂಗಳಮ್ಮ ಪ್ಯಾಂಟ್ ಮತ್ತು ಶರ್ಟ್ ಪೀಸ್ ಅನ್ನು ನೀಡಿದರು. ಮಂಗಳಮ್ಮನ ಅಣ್ಣ ಸೋದರಮಾವನ ಉಡುಗೊರೆಯಾಗಿ ಉಂಗುರವನ್ನು ಮೈತ್ರಿಗೆ ತೊಡಿಸಿದರು.ಕಿಶನ್ ಗೆ ಪಂಚೆ ಶಲ್ಯದ ಸಾಂಪ್ರದಾಯಿಕ ಉಡುಗೊರೆಯಿತ್ತು ಹರಸಿದರು.
ಅಜ್ಜ ಮೊಮ್ಮಗಳಿಗೆ ಗಣೇಶನ ಸುಂದರವಾದ ವಿಗ್ರಹವೊಂದನ್ನು ನೀಡಿದರು. ಅಜ್ಜಿ ತುಂಟ ಕೃಷ್ಣನ ಸುಂದರ ಪಟವಿರುವ ಫ್ರೇಮ್ ಅನ್ನು ನೀಡಿದರು. ಮಹೇಶ ತನ್ನ ಅಕ್ಕನಿಗೆ ಏನು ಕೊಡುತ್ತೇನೆಂದು ಸರ್ಪ್ರೈಸ್ ಆಗಿ ಇಟ್ಟಿದ್ದ. ಅದನ್ನು ಹಾಗೆಯೇ ಒಂದು ಬಾಕ್ಸ್ನಲ್ಲಿ ಕವರ್ ಮಾಡಿ ಅಕ್ಕನ ಕೈಗೆ ಕೊಟ್ಟು ನಮಸ್ಕರಿಸಿದ.
ಅದರೊಳಗೊಂದು ಪುಟಾಣಿ ಹುಡುಗನ ಬೊಂಬೆ . ಬಟನ್ ಪ್ರೆಸ್ ಮಾಡಿದಾಗ ಮಹೇಶನದೇ ಧ್ವನಿ. ವಿಶೇಷವಾದ ಗಿಫ್ಟ್ ಅನ್ನು ಅಕ್ಕನಿಗಾಗಿ ರೆಡಿ ಮಾಡಿ ತಂದಿದ್ದನು.
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
17-05-2020.
👏👏👌
ReplyDeleteಥ್ಯಾಂಕ್ಯೂ 💐🙏
Delete