Sunday, 17 May 2020

ಸಪ್ತ ಗಣಪತಿ ಸ್ತುತಿ




ಸಪ್ತ ಗಣಪತಿ ಸ್ತುತಿ

ಮಂಗಳಮಹಿಮನೆ ಏಕದಂತನೆ

ಗೋಡೆಯಲುದಿಸಿದ ಗಜಮುಖನೇ

ಮಧುವಾಹಿನಿಯ ತೀರದಿ ನೆಲೆಸಿದ

ಮಧೂರ ಗಣಪಗೆ ಮೊದಲ ವಂದನೆ||೧||


ವಿಘ್ನವ ಸರಿಸಿ ನಮ್ಮನು ಹರಸಿ

ಕುಮಾರ ಸೋದರ ಸ್ವಯಂ ಪ್ರಭಾಕರ

ಕೂಡುವೆ ಕರವ ಬೇಡುವೆ ವರವ

ಶರವು ಮಹಾಗಣಪನೆ ನಿತ್ಯವಂದನೆ||೨||



ಬಯಲೇ ಆಲಯ ಕಿರಣವು ರವಿಯ

ಸುರಿವನು ವರುಣ ತಾಳುವ ಗಜಕರ್ಣ

ವಿದ್ಯಾಬುದ್ಧಿಯ ಸಿರಿಸಂತಾನವ

ಕರುಣಿಪ ಸೌತಡ್ಕ ಗಣಪಗೆ ಕೋಟಿವಂದನೆ||೩||



ಕುಂಭಾಸುರನ ಸಂಹಾರಕೆ ಗದೆಯ ವರವಿತ್ತ

ಲಂಬೋದರನೇ ವರದಹಸ್ತನೇ

ಕೃಪೆದೋರಿ ಮುನ್ನಡೆಸು ಕೃಷ್ಣಪಿಂಗಾಕ್ಷನೇ

ಕುಂಭಾಶಿ ಗಣಪನೇ ಮೊರೆಯಿಡುವೆನು||೪||



ವರಾಹಿ ತಟದ ಜಟಾಧಾರಿಯೇ

ಮೋದಕಪ್ರಿಯನೇ ಸಂಕಷ್ಟಹರನೇ

ದ್ವಿಮುಖ ಗಣಪನೇ ಸಿಂಹಗಣಪನೇ

ಶಿರಬಾಗುವೆ ಹಟ್ಟಿಯಂಗಡಿ ವಿನಾಯಕನೇ||೫||



ದ್ವಿಭುಜ ರೂಪನೇ ಪದ್ಮಪ್ರಿಯನೇ

ಮೋದಕ ಹಸ್ತನೇ ಬಾಲಗಣಪನೇ

ನಿತ್ಯದ ಕಾರ್ಯಕೆ ನೀಡುವೆ ರಕ್ಷಣೆ

ಕಾಪಾಡು ಇಡಗುಂಜಿ ವಿನಾಯಕನೇ||೬||



ಬ್ರಹ್ಮಾಚಾರಿಯ ರೂಪದ ಗಣಪನೇ

ಕರದಲಿ ಲಿಂಗವ ಪಿಡಿದ ಭಾಲಚಂದ್ರನೇ

ಭೂಕೈಲಾಸದಿ ನೆಲೆಸಿದ ವಿದ್ಯಾಪತಿಯೇ

ಶರಣಾಗಿ ನಿಂದಿಹೆ ಗೋಕರ್ಣ ಗಣಪನೇ||೭||



ಸಪ್ತಗಣಪತಿಯ ಸ್ತುತಿಸುವೆ ಅನುದಿನ

ಸನ್ಮತಿ ನೀಡುವ ಮೂಷಿಕ ವಾಹನ

ಬೇಡುವ ಭಕ್ತರಿಗೆ ಅಭಯದಾಯಕ

ಬಿಡದೆ ನೀ ಪೊರೆಯೋ ದೀನ ರಕ್ಷಕ||೮||

                         🙏

✍️... ಅನಿತಾ ಜಿ.ಕೆ.ಭಟ್.



2 comments: