ಮಾನವೀಯತೆ ಮೆರೆದ ವೈದ್ಯೆ
ಆ ಸುದ್ದಿ ಓದುತ್ತಿದ್ದಂತೆ ಕಣ್ತುಂಬಿ ಬಂತು. ಮನವು ಮೂಕವಾಯಿತು .ಮಿದುಳು ವಾಯುವೇಗದಲ್ಲಿ ದಶಕಗಳ ಹಿಂದೆ ನಾಗಾಲೋಟ ಗೈದಿತು. ಹೌದು.. ಪ್ರತಿಯೊಬ್ಬ ಹೆಣ್ಣಿನ ಜೀವನದ ಕಷ್ಟಕರ ಸಮಯವದು.. ಸವಾಲಿನ ಕೆಲಸ.. ತಾಯ್ತನದ ನೋವಿನಲ್ಲಿ ನರನಾಡಿಗಳೆಲ್ಲ ಚೀರುವ ಸಮಯ. ಇಂತಹ ಸಮಯದಲ್ಲಿ ಸಾಂತ್ವನ ಹೇಳುತ್ತಾ.. ಧೈರ್ಯ ತುಂಬುವ ವೈದ್ಯರಿಗೆ ಎಷ್ಟು ಗೌರವ ಸೂಚಿಸಿದರೂ ಕಡಿಮೆಯೇ.
ಆದರೆ ಅದ್ಯಾವುದನ್ನೂ ಬಯಸದೆ ತನ್ನ ವೃತ್ತಿ ಧರ್ಮವನ್ನು ಪಾಲಿಸುತ್ತಾ ಹೆಣ್ಣೊಬ್ಬಳ ಕಷ್ಟಕ್ಕೆ ಮಿಡಿದ ಮಂಗಳೂರಿನ ಖ್ಯಾತ ಪ್ರಸೂತಿ ತಜ್ಞೆ ಡಾ|ಪೂರ್ಣಿಮಾ ಭಟ್ ಅವರ ಮಾನವೀಯತೆ ಶ್ಲಾಘನೀಯ.. ನನಗೂ ಪ್ರಸೂತಿ ತಜ್ಞೆ ಆಗಿದ್ದವರು ಹಾಗೂ ಕುಟುಂಬ ಸ್ನೇಹಿತೆ ಕೂಡ. ಒಬ್ಬ ವೈದ್ಯೆಯಾಗಿ ರೋಗಿಯನ್ನು ಆರೈಕೆ ಮಾಡುವುದಕ್ಕಿಂತ ಹೆಚ್ಚಾಗಿ ಹಿರಿಯಕ್ಕನಂತೆ ಜೊತೆಯಾಗುತ್ತಾರೆ.
ಲಾಕ್ಡೌನ್ ಆಗಿರುವಂತಹ ಈ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಹೆರಿಗೆಗೆ ಬಹಳ ತೊಂದರೆಯಾಗುತ್ತಿದೆ.ಇಂತಹ ಸಂಕಷ್ಟಕ್ಕೆ ಸಿಲುಕಿದ ಗರ್ಭಿಣಿಯ ನೋವಿಗೆ ಸ್ಪಂದಿಸಲು ಹಿಂದೆಮುಂದೆ ನೋಡದೆ ಸನ್ನದ್ಧರಾದವರು ಡಾ|ಪೂರ್ಣಿಮಾ ಭಟ್... . ಲಾಕ್ ಡೌನ್ ಸಮಯದಲ್ಲಿ ಒಂದು ರಾತ್ರಿ ವೈದ್ಯೆಗೆ ಕರೆಯೊಂದು ಬರುತ್ತದೆ. ಆಕೆಯ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಸಾಯಿರ (ಹೆಸರು ಬದಲಿಸಲಾಗಿದೆ) ಅವರ ಪತಿ ಕರೆ ಮಾಡುತ್ತಾರೆ.ತನ್ನ ಮಡದಿಗೆ ಪ್ರಸವವೇದನೆ ಆರಂಭವಾಗಿದೆ ಎಂದು. ತಕ್ಷಣವೇ ವೈದ್ಯೆ ತಾನು ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಗರ್ಭಿಣಿಯನ್ನು ಆಕೆಯ ಪತಿ ನೆರೆ ಮನೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ .
ಸಾಯಿರಾಗೆ ಮೊದಲ ಎರಡು ಹೆರಿಗೆ ಕೂಡ ಸಿಸೇರಿಯನ್ ಆಗಿದ್ದು.. ಈಗ ಮೂರನೇ ಬಾರಿ ಗರ್ಭಿಣಿಯಾಗಿದ್ದರು. ಈ ಬಾರಿ ಕೂಡ ಸಿಸೇರಿಯನ್ ಅತೀ ಅಗತ್ಯವಾಗಿತ್ತು ತಾಯಿ-ಮಗುವಿನ ಜೀವ ಉಳಿಸಲು.ಆದರೆ ಲಾಕ್ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಬಡಕುಟುಂಬ ಸಾಯಿರಾರದು. ಸಿಸೇರಿಯನ್ ಗೆ ತಗಲುವಂತಹ 80,000/ ರೂಪಾಯಿಗಳಷ್ಟು ಖರ್ಚು ಭರಿಸಲು ಕುಟುಂಬದಿಂದ ಸಾಧ್ಯವಿಲ್ಲ ಎಂದಾಗ.. ವೈದ್ಯೆ ಕೈಚೆಲ್ಲಿ ಕುಳಿತುಕೊಳ್ಳದೆ.. ಹತ್ತಿರವೇ ಇದ್ದಂತಹ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಸಂಪರ್ಕಿಸಿ ಸಿಸೇರಿಯನ್ ಮಾಡಲು ಅವಕಾಶವನ್ನು ಕೋರುತ್ತಾರೆ. ಒಪ್ಪಿಗೆ ದೊರೆತ ಕೂಡಲೇ ತನ್ನದೇ ಕಾರಿನಲ್ಲಿ ಗರ್ಭಿಣಿ ಹಾಗೂ ಆಕೆಯ ಪತಿಯನ್ನು ಕರೆದೊಯ್ದು... ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ,ಸಾಯಿರಾಗೆ ಸಿಸೇರಿಯನ್ ಆಪರೇಶನ್ ಮಾಡಿ.. ತಾಯಿ ಹಾಗೂ ಮಗುವನ್ನು ಪ್ರಾಣಾಪಾಯದಿಂದ ಪಾರುಮಾಡುತ್ತಾರೆ.
ಸಾಯಿರಾ ಅವರ ಪತಿ ವೈದ್ಯೆಗೆ ಧನ್ಯವಾದಗಳನ್ನಾದರೂ ಹೇಳೋಣವೆಂದು ಅವರನ್ನು ಹುಡುಕಾಡಿದರೆ ಅವರು ಅಂತಹ ಯಾವ ಗೌರವವನ್ನೂ ಬಯಸದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ , ಜವಾಬ್ದಾರಿಯುತವಾಗಿ ನಿರ್ವಹಿಸಿ ತನ್ನ ಮನೆಗೆ ತೆರಳಿದ್ದರು.
ಸಂಕೀರ್ಣ ಪರಿಸ್ಥಿತಿಯಲ್ಲಿದ್ದ ಗರ್ಭಿಣಿಗೆ ತಡ ರಾತ್ರಿಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯೆಗೆ ಸಲಾಂ.. ನಿಸ್ವಾರ್ಥವಾಗಿ ಸೇವೆಗೈಯುವ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವ ಡಾ| ಪೂರ್ಣಿಮಾ ಭಟ್ ಅವರಂತಹ ವೈದ್ಯರ ಸಂಖ್ಯೆ ಹೆಚ್ಚಲಿ...
ಈ ಸುದ್ದಿಯನ್ನು ಬೆಳ್ಳಂಬೆಳಗ್ಗೆ ಪತ್ರಿಕೆಯಲ್ಲಿ ಪತಿ ತೋರಿಸಿದಾಗ ಭಾವದುಂಬಿ ವೈದ್ಯರಿಗೆ ತಮ್ಮ ಜೀವನದಲ್ಲಿ ಯಶಸ್ಸು ಆಯುರಾರೋಗ್ಯ ದೊರಕಲಿ ಎಂದು ಹಾರೈಸಿದ್ದೆ.ಆಕೆ ಮೊದಲು ಎತ್ತಿಕೊಂಡಿದ್ದ ನನ್ನಿಬ್ಬರು ಮಕ್ಕಳು ಸುಖವಾಗಿ ನಿದ್ರಿಸುತ್ತಿದ್ದರು.ಮಕ್ಕಳು ಎದ್ದಮೇಲೆ ಅವರಿಗೂ ಸುದ್ದಿಯನ್ನು ಅರುಹಿದ್ದೆ..
✍️... ಅನಿತಾ ಜಿ.ಕೆ.ಭಟ್.
05-05-2020.
05-05-2020.
ಪ್ರತಿಲಿಪಿ ಕನ್ನಡದ ದೈನಿಕ ವಿಷಯಾಧಾರಿತ ಬರಹ..ವಿಷಯ :- ಆ ಸುದ್ದಿ ಓದಿದೊಡನೆಯೇ...
ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ.
👏👏💐
ReplyDeleteಥ್ಯಾಂಕ್ಯೂ 💐🙏
ReplyDelete