ಲಾಕ್ ಡೌನ್ ಪ್ರಸವ ವೇದನೆ
"ರೀ ....ಈ ಸಲವಾದರೂ ನನ್ನ ಹೆರಿಗೆಯ ಸಮಯದಲ್ಲಿ ನೀವು ನನ್ನ ಜೊತೆಯಲ್ಲಿ ಇರಬೇಕು..." ಎಂದು ಕಣ್ತುಂಬಿಕೊಂಡು ನುಡಿದಿದ್ದಳು ಸ್ವಾತಿ.
"ಖಂಡಿತ ಬರುತ್ತೇನೆ ....ಈಗ ನೀನು ಮತ್ತು ಮಗ ಏನೂ ಚಿಂತೆ ಮಾಡದೆ ಸುಖವಾಗಿ ಪ್ರಯಾಣಿಸಿ... ಇನ್ನೆರಡು ತಿಂಗಳಲ್ಲಿ ನಾನು ನಿಮ್ಮ ಜೊತೆ ಇರುತ್ತೇನೆ..." ಎಂದು ಭರವಸೆ ನೀಡಿ ಸ್ವಾತಿ ಮತ್ತು ಸ್ವರೂಪನನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು ಪ್ರದ್ಯುಮ್ನ.
ವಿಮಾನ ಮೇಲೇರುತ್ತಿದ್ದಂತೆ ಪ್ರದ್ಯುಮ್ನನ ಮನಸು ಆರ್ದ್ರವಾಯಿತು. ' ಖಂಡಿತ ಈ ಬಾರಿ ಮೊದಲ ಹೆರಿಗೆಯಂತೆ ನನ್ನ ಅನುಪಸ್ಥಿತಿ ಅವಳಿಗೆ ಕಾಡಬಾರದು .. ನಾನು ಆ ವೇಳೆಗೆ ತವರಿಗೆ ತೆರಳಿ ಅವಳ ಜೊತೆ ಇರಬೇಕು.. ಅವಳಿಗೆ ನಾನೇ ಮೈದಡವಿ ಸಾಂತ್ವನ ಹೇಳಬೇಕು..." ಎಂದು ಯೋಚಿಸುತ್ತಾ ಆಫೀಸಿನ ಕಡೆಗೆ ಹೆಜ್ಜೆ ಹಾಕಿದ.
ಪ್ರದ್ಯುಮ್ನ ಅರಬ್ ರಾಷ್ಟ್ರದಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾನು ದುಡಿದು ಊರಲ್ಲಿದ್ದ ಅಪ್ಪನ ಕೈಗೆ ದುಡ್ಡು ಕಳುಹಿಸುತ್ತಿದ್ದ. ಮದುವೆಯಾಗದೆ ಇದ್ದ ವರ್ಷ 35 ದಾಟಿದ ಇಬ್ಬರು ಅಕ್ಕಂದಿರು, ಅನಾರೋಗ್ಯ ಪೀಡಿತೆ ಅಮ್ಮ, ಕಾಲೇಜು ಶಿಕ್ಷಣ ಮುಂದುವರಿಸುತ್ತಿರುವ ತಮ್ಮ..ಇವರೆಲ್ಲರ ಜೀವನ ಪ್ರದ್ಯುಮ್ನ ನ ಸಂಪಾದನೆಯನ್ನು ಅವಲಂಬಿಸಿತ್ತು.ಅಕ್ಕಂದಿರಿಗೆ ಮದುವೆ ಮಾಡಲು ವರದಕ್ಷಣೆ ನೀಡಬೇಕಾದರೆ ಪ್ರದ್ಯುಮ್ನ ಹೊರದೇಶದಲ್ಲಿ ದುಡಿಯುವುದು ಅನಿವಾರ್ಯವಾಗಿತ್ತು. ಸ್ವಾತಿ ಮತ್ತು ಸ್ವರೂಪ್ ತಾಯ್ನಾಡು ಭಾರತಕ್ಕೆ ಮರಳಿದರು.. ಸ್ವಾತಿಯ ತವರು ಮನೆಯಲ್ಲಿ ಉಳಿದುಕೊಂಡರು.
ಸ್ವಾತಿಯ ತವರುಮನೆ ಇರುವುದು ಒಂದು ಪುಟ್ಟ ಹಳ್ಳಿಯಲ್ಲಿ. ಕರ್ನಾಟಕ ಮತ್ತು ಕೇರಳ ಗಡಿಭಾಗದ ಕೇರಳದ ಆಡಳಿತಕ್ಕೆ ಒಳಪಟ್ಟ ಗ್ರಾಮದಲ್ಲಿ.. ರಾಜ್ಯ ಕೇರಳವಾದರೂ ತಮ್ಮ ಚಟುವಟಿಕೆಗಳಿಗೆ ಬಳಸುತ್ತಿದ್ದುದು ಹತ್ತಿರದಲ್ಲಿದ್ದ ಕರ್ನಾಟಕದ ಮಂಗಳೂರನ್ನು. ಗುಡ್ಡ ಬೆಟ್ಟ, ಹಚ್ಚಹಸಿರಿನ ತೋಟದ ನಡುವೆ ಪುಟ್ಟ ಹೆಂಚಿನ ಮನೆ ಅವರದು.. ಹೆಸರಿಗೆ ಹಳ್ಳಿಯಾದರೂ ಆಧುನಿಕ ಸೌಕರ್ಯಗಳನ್ನು ಒಂದೊಂದಾಗಿ ಕಾಲಿಡುತ್ತಿದ್ದ ಊರು. ತವರಿನಲ್ಲಿ ಇದ್ದ ಸ್ವಾತಿಗೆ ಪತಿಯ ಕನವರಿಕೆ ಜೋರಾಗಿತ್ತು. ಈ ಸಲವಂತೂ ಪತಿ ಖಂಡಿತಾ ನಿರಾಸೆ ಮಾಡಲಾರರು ಎಂದು ಗಟ್ಟಿಯಾಗಿ ನಂಬಿದ್ದಳು ಸ್ವಾತಿ.
ಆಕೆಯನ್ನು ತಪಾಸಣೆ ಮಾಡುತ್ತಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಏಪ್ರಿಲ್ ಮಧ್ಯಭಾಗದಲ್ಲಿ ಹೆರಿಗೆ ಆಗಬಹುದು ಎಂದಿದ್ದರು. .ಅದೇ ಸಮಯಕ್ಕೆ ಸರಿಹೊಂದುವಂತೆ ಬರಲು ಪ್ರದ್ಯುಮ್ನ ತಯಾರಿ ನಡೆಸಿದ್ದ. ಟಿಕೆಟ್ ಬುಕ್ ಮಾಡಿದ್ದ.ಒಂದು ದಿನ ಇದ್ದಕ್ಕಿದ್ದಂತೆ ಅರಬ್ ರಾಷ್ಟ್ರ ಮತ್ತು ಭಾರತದ ನಡುವೆ ವಿಮಾನಯಾನ ನಿಂತುಹೋಯಿತು.ಕಾರಣ ಕೋವಿಡ್ 19 ವೈರಸ್ ಸೋಂಕು.. ಪ್ರದ್ಯುಮ್ನ ಆ ಸುದ್ದಿ ಕೇಳಿ ನಿಂತಲ್ಲೇ ಕುಸಿದಿದ್ದ. ಸ್ವಾತಿಯೂ ಆತಂಕಕ್ಕೊಳಗಾಗಿದ್ದಳು. ಗರ್ಭಿಣಿಗೆ ಅತಿಯಾದ ಯೋಚನೆ ಒಳ್ಳೆಯದಲ್ಲ ಎಂದು ತಂದೆ-ತಾಯಿ ಸಾಂತ್ವನ ಹೇಳುತ್ತಿದ್ದರು. ಖಂಡಿತ ನಿನ್ನ ಪತಿ ಬರುವರು ಎಂದು ಧೈರ್ಯ ತುಂಬುತ್ತಿದ್ದರು. ತನ್ನ ಹೆರಿಗೆ ಸಮಯಕ್ಕೆ ಪತಿಗೆ ಬರಲಾಗದು ಎಂಬ ಸತ್ಯ ಅವಳನ್ನು ಮೂಕವಾಗಿಸಿತು. ಪರಿಸ್ಥಿತಿಯ ಕೈಗೊಂಬೆಯಾಗಿದ್ದರು ಪ್ರದ್ಯುಮ್ನ ಮತ್ತು ಸ್ವಾತಿ.ಪ್ರದ್ಯುಮ್ನ ತನ್ನ ವೈಯಕ್ತಿಕ ಬದುಕಿನ ಯೋಚನೆಯನ್ನು ಬದಿಗಿಟ್ಟು ಆಸ್ಪತ್ರೆಯಲ್ಲಿ ಹಗಲಿರುಳು ದುಡಿಯುತ್ತಿದ್ದರು,ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ನವಮಾಸದವರೆಗೆ ಆರೋಗ್ಯವಾಗಿ ಓಡಾಡಿಕೊಂಡಿದ್ದರು ಸ್ವಾತಿ. ವೈದ್ಯರು ಹೇಳಿದಂತೆ ಎಲ್ಲಾ ಜಾಗ್ರತೆಗಳನ್ನು ಮಾಡುತ್ತಿದ್ದ ಸ್ವಾತಿಗೆ ಹೇಳಿದ ದಿನಕ್ಕಿಂತ ಸ್ವಲ್ಪ ಎರಡು ವಾರ ಮೊದಲೇ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ತಪಾಸಣೆ ಮಾಡುತ್ತಿದ್ದರು ವೈದ್ಯರು, ನರ್ಸಿಂಗ್ ಹೋಂ ಇದ್ದಿದ್ದು ಕರ್ನಾಟಕದಲ್ಲಿ..!!! ವೈರಾಣುವಿನ ಸೋಂಕು ಅತಿಯಾಗಿ ಹಬ್ಬುತ್ತಿದ್ದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ಗಡಿಯನ್ನು ಮುಚ್ಚಲಾಗಿತ್ತು. ಹೊತ್ತೇರುತ್ತಿದ್ದಂತೆ ಸ್ವಾತಿಯ ವೇದನೆ ತೀವ್ರವಾಯಿತು.
ನೆರೆಹೊರೆಯವರ ಸಹಕಾರದಿಂದ ವಾಹನದಲ್ಲಿ ಗರ್ಭಿಣಿಯನ್ನು ಕರೆದುಕೊಂಡು . ಹೊರಟರು. ದಾರಿ ಮಧ್ಯದಲ್ಲಿ ನಿಲ್ಲಿಸಿದ ಪೊಲೀಸರು ವಾಹನ ತಪಾಸಣೆ ನಡೆಸಿ ಅಂಬುಲೆನ್ಸ್ ಅನ್ನು ಒದಗಿಸಿಕೊಟ್ಟರು. ಆಂಬುಲೆನ್ಸ್ ಮೂಲಕ ಸಾಗುತ್ತಿದ್ದ ಸ್ವಾತಿ ಹಾಗೂ ಆಕೆಯ ಕುಟುಂಬಕ್ಕೆ ಮುಂದೇನಾಗಬಹುದು ಎಂಬುದರ ಅರಿವು ಇರಲಿಲ್ಲ. ಎರಡು ರಾಜ್ಯಗಳ ಗಡಿಗೆ ತಲುಪುತ್ತಿದ್ದಂತೆಯೇ ಮತ್ತೊಮ್ಮೆ ತಪಾಸಣೆಗಾಗಿ ನಿಲ್ಲಿಸಿದಾಗ ಆಕೆಯ ಸಂಕಟ ಸುತ್ತಲಿನವರಿಗೂ ಕೇಳಿಸುತ್ತಿತ್ತು.ಆದರೆ ತಪಾಸಣೆ ಮಾಡುತ್ತಿದ್ದ, ಗಡಿ ಕಾಯುತ್ತಿದ್ದ ಎರಡೂ ಕಡೆಯ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಬಂದಂತಹ ಸೂಚನೆಗಳನ್ನು ಪಾಲಿಸಬೇಕಾದದ್ದು ಕರ್ತವ್ಯವಾಗಿತ್ತು. ಕರ್ನಾಟಕಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂಬುದು ಅರಿವಾದಾಗ ಕುಟುಂಬದವರಿಗೆ ಮುಂದಿನ ದಾರಿ ತೋಚದಾಯಿತು. ತಮ್ಮದೇ ರಾಜ್ಯದಲ್ಲಿದ್ದ ನಲುವತ್ತು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲು ಅಧಿಕಾರಿಗಳು ತಿಳಿಸಿದರು.ಕೇವಲ ಇಪ್ಪತ್ತು ನಿಮಿಷದಲ್ಲಿ ತಲುಪಬಹುದಾದ ತಾನು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಮಂಗಳೂರಿನ ನರ್ಸಿಂಗ್ ಹೋಂ ನ ಅಷ್ಟು ದೂರ ಹೋಗುವುದು ಈ ಪರಿಸ್ಥಿತಿಯಲ್ಲಿ ದುಸ್ತರವಾಗಿತ್ತು.
ಆ ವೇಳೆಗೆ ಇನ್ಸ್ಪೆಕ್ಟರ್ ಭುಜಂಗ ಅಂತರಾಜ್ಯ ಗಡಿ ತಪಾಸಣೆಗೆ ಆಗಮಿಸಿದರು. ಗರ್ಭಿಣಿಯ ವಿಷಯ ಅರಿತ ಇನ್ಸ್ಪೆಕ್ಟರ್ ಭುಜಂಗ ತಕ್ಷಣ ಸ್ಪಂದಿಸಿ, ಗಡಿ ಗೇಟು ತೆರೆದು ,ತನ್ನ ವಾಹನಕ್ಕೆ ಆಕೆಯನ್ನು ಹಸ್ತಾಂತರಿಸಿ ಶರವೇಗದಲ್ಲಿ ವಾಹನ ಚಲಾಯಿಸಿದರು.. ಅವರ ಮುಂದಿದ್ದ ಮೀಟರ್ 120 ಕಿಲೋಮೀಟರ್ ಎಂದು ಸೂಚಿಸುತ್ತಿತ್ತು.
ಆಸ್ಪತ್ರೆಗೆ ಸೇರಿಸಿ ತಾನು ತನ್ನ ಕೈಲಾದ ಆರ್ಥಿಕ ಸಹಾಯವನ್ನು ಮಾಡಿ ಹೊರಡುತ್ತಿದ್ದಂತೆ ಅಲ್ಲಿನ ಶುಶ್ರೂಷಕಿ "ಸರ್ ಹೆಣ್ಣುಮಗು.." ಎಂದು ಉದ್ಗರಿಸಿದರು. ಗಂಭೀರವಾಗಿಯೇ ತಲೆಯಲ್ಲಾಡಿಸಿ ತನ್ನ ಕರ್ತವ್ಯಕ್ಕೆ ತೆರಳಿದರು ಇನ್ಸ್ಪೆಕ್ಟರ್ ಭುಜಂಗ. ರಾತ್ರಿ ಮನೆಗೆ ಮರಳುತ್ತಿದ್ದಾಗ ತನ್ನ ಪುಟ್ಟ ಮಗಳು ಮೈಥಿಲಿ ಅಮ್ಮನ ಮಡಿಲಲ್ಲಿ ಮುದ್ದುಕಂದ ಮಲಗಿದ್ದ ಚಿತ್ರವನ್ನು ಬಿಡಿಸಿ ಇಟ್ಟಿದ್ದಳು. ಅಪ್ಪನನ್ನು ಕಂಡವಳೇ.. ಓಡಿಹೋಗಿ ತನ್ನ ಚಿತ್ರವನ್ನು ತೋರಿಸಿ "ಹೇಗಾಗಿದೆ.. ಅಪ್ಪಾ ?"ಎಂದಾಗ ಅಷ್ಟರವರೆಗೆ ತಡೆದುಕೊಂಡಿದ್ದ ಮನದಲ್ಲಿ ಹೆಪ್ಪುಗಟ್ಟಿದ ನೋವೆಲ್ಲ ಕರಗಿ ಕಣ್ತುಂಬಿ ಬಂತು.
ತನ್ನ ಮಗಳನ್ನು ಬೆನ್ನುತಟ್ಟಿ "ತಾಯಿಯ ಮಡಿಲಲ್ಲಿ ಮುದ್ದು ಮಗು ಆನಂದದಿಂದ ಇರಲಿ" ಎಂದರು. "ಅಪ್ಪ ನಾನು ನನ್ನ ಅಮ್ಮನ ಮಡಿಲಲ್ಲಿ ಹೀಗೆ ಮಲಗಿದ್ದೇನಾ.". ಎಂದಾಗ ಅವರ ಬಳಿ ಉತ್ತರವಿರಲಿಲ್ಲ."ಇಂದು ಒಂದು ಮುದ್ದು ಕಂದ ತನ್ನ ತಾಯಿಯ ಮಡಿಲಲ್ಲಿ ಸುಖವಾಗಿ ನಿದ್ರಿಸುವಂತೆ ನೋಡಿಕೊಂಡಿದ್ದೇನೆ" ಎಂದಷ್ಟೇ ಹೇಳಲು ಸಾಧ್ಯವಾಗಿತ್ತು ಅವರಿಗೆ.
ಮನಸ್ಸು ಐದು ವರ್ಷಗಳ ಹಿಂದೆ ಓಡಿತು. ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿ ತಾನು ದೂರದೂರಿನಲ್ಲಿ ಕರ್ತವ್ಯ ನಿರ್ವಹಿಸಲು ಹೋಗಿದ್ದಾಗ ,ತನ್ನ ಪತ್ನಿಗೆ ಹೆರಿಗೆ ನೋವು ಬಂದು ಸಮಯಕ್ಕೆ ಸರಿಯಾಗಿ ಯಾರ ಸಹಾಯವೂ ಸಿಗದೇ, ಸರಿಯಾಗಿ ಚಿಕಿತ್ಸೆ ಸಿಗದೇ ತನ್ನ ಮುದ್ದಿನ ಮಡದಿ ಪ್ರಾಣ ಕಳೆದುಕೊಂಡಿದ್ದಳು. ಮಗಳು ಮಾತ್ರ ಬದುಕುಳಿದಿದ್ದಳು. ಆ ಘಟನೆಯನ್ನು ನೆನಪಿಸಿಕೊಂಡ ಇನ್ಸ್ಪೆಕ್ಟರ್ ಭುಜಂಗ ಇಂದು ಸರಕಾರಿ ಆದೇಶವನ್ನು ಮೀರಿ ಮಾನವೀಯತೆಯಿಂದ ಒಬ್ಬ ಗರ್ಭಿಣಿ ಸಹೋದರಿಗೆ ಸಹಾಯ ಹಸ್ತವನ್ನು ಚಾಚಿದ್ದರು.. ಇದನ್ನೆಲ್ಲ ಯೋಚಿಸುತ್ತಿದ್ದಾಗ ರೇಡಿಯೋದಲ್ಲಿ ಹಾಡೊಂದು ಬಿತ್ತರವಾಗುತ್ತಿತ್ತು "ಏನಾದರೂ ಆಗು ನೀ...ಮೊದಲು ಮಾನವನಾಗು.... " ಎಂಬ ಸಿದ್ಧಯ್ಯ ಪುರಾಣಿಕರ ಹಾಡು ಅಲೆಯಾಗಿ ತೇಲಿ ಬಂತು..
✍️...ಅನಿತಾ ಜಿ.ಕೆ .ಭಟ್.
07-05-2020.
Momspresso Kannada ಮತ್ತು Pratilipi Kannada ದಲ್ಲಿ ಪ್ರಕಟಿತ ಬರಹ.
Vaasthava...kannu thumbi banthu...nijavagiyu sakalakke vaidyakeeya neravu sigade paradaduvantha athankadallive
ReplyDeleteesto jeevagalu
ಹೌದು...ಸಂಕಷ್ಟದ ದಿನಗಳಿವು... 💐🙏 ಧನ್ಯವಾದಗಳು
Deleteಭಾವುಕಳನ್ನಾಗಿಸಿತು ನಿಮ್ಮ ಕಥೆ
Delete