ಪ್ರತಿಭೆ
ಉಷಾ ಗಂಡನಿಗಿಷ್ಟವಾದ ಅಡುಗೆಯನ್ನು ಮಾಡಿ ಊಟದ ಮೇಜಿನ ಮೇಲೆ ಮುಚ್ಚಿಟ್ಟು ಗಂಡ ಬರುವುದಕ್ಕೂ ಮುನ್ನ ಸ್ನಾನ ಮಾಡಿ ಬರುತ್ತೇನೆಂದು ಬಚ್ಚಲುಮನೆಗೆ ಧಾವಿಸಿದಳು.ಪ್ರಶಾಂತ್ ಎಂದಿಗಿಂತ ಹತ್ತು ನಿಮಿಷ ಬೇಗವೇ ಆಫೀಸಿನಿಂದ ಹೊರಟು ಮನೆಗೆ ಬಂದ. ಬೈಕ್ ನಿಲ್ಲಿಸಿದಾಗ" ಹಾಡು ಹಳೆಯದಾದರೇನು ಭಾವ ನವನವೀನ..ಎದೆಯ ಭಾವ ಹೊಮ್ಮುವುದಕೆ..."ಎಂದು ಸುಶ್ರಾವ್ಯವಾಗಿ ಹಾಡುವ ದನಿಯೊಂದು ಗಾಳಿಯಲ್ಲಿ ಅಲೆಅಲೆಯಾಗಿ ತೇಲಿಬಂದಾಗ ಸ್ವಲ್ಪ ನಿಧಾನಿಸಿದ.ಹಾಡು ನಿಂತಾಗ ಕರೆಗಂಟೆ ಅದುಮಿದ.ಉಷಾಳ ಒದ್ದೆಯಾಗಿದ್ದ ಕೂದಲುಗಳು,ಹಿತವಾದ ಸೋಪಿನ ಪರಿಮಳ ಅವನಿಗೆಲ್ಲವನ್ನು ಅರ್ಥಮಾಡಿಸಿತು.ಆಶ್ಚರ್ಯವೂ ಆಯಿತು.. ಇಷ್ಟು ವರ್ಷದಿಂದ ನಾನಿವಳ ಕಂಠಸಿರಿಯಲ್ಲಿ ಹಾಡನ್ನು ಆಲಿಸಲಿಲ್ಲವಲ್ಲಾ ಎಂದು ತನ್ನನ್ನೇ ಬೈದುಕೊಂಡು ಒಳಗೆ ಬಂದ.
ಪ್ರಶಾಂತ್ ಬ್ಯಾಂಕ್ ಉದ್ಯೋಗಿ.ಆಗಾಗ ಟ್ರಾನ್ಸ್ ಫರ್ ಆಗುತ್ತಿತ್ತು.ಮನೆಯಲ್ಲಿ ತಂದೆ ತಾಯಿ ತಮ್ಮ ತಂಗಿ ಇದ್ದರು.ಅಪ್ಪ ಪುಟ್ಟ ಹೋಟೇಲೊಂದನ್ನು ಇಟ್ಟಿದ್ದರು.ಅದರಿಂದ ಬಂದ ಆದಾಯದಲ್ಲಿ ಕುಟುಂಬ ಜೀವಿಸುತ್ತಿತ್ತು.ಮಗನ ಸಂಪಾದನೆ ಆರಂಭವಾದಾಗ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಾ ಬಂತು.ತಂದೆಯೂ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.ಮಗನಿಗೆ ಬೇಗ ಮದುವೆ ಮಾಡೋಣ ಎಂದು ಕನ್ಯಾನ್ವೇಷಣೆಯಲ್ಲಿ ತೊಡಗಿದರು.
ನೆಂಟರೊಬ್ಬರು ಕುದುರಿಸಿದ ಸಂಬಂಧ ಹೊಂದಾಣಿಕೆಯಾಗಿ ಉಷಾ ಪ್ರಶಾಂತನ ಮಡದಿಯಾದಳು.ಪಟ್ಟಣದಲ್ಲಿ ಮನೆ ಮಾಡಿಕೊಂಡರೆ ಖರ್ಚು ಹೆಚ್ಚು.ಉಳಿತಾಯ ಕಡಿಮೆ.ಹಳ್ಳಿಯಿಂದಲೇ ಹೋಗಿ ಬಂದು ಮಾಡಿದರೆ ಅನುಕೂಲ ಎಂದು ದಿನವೂ ಮೂವತ್ತು ಕಿಲೋಮೀಟರ್ ಬಸ್ ಪ್ರಯಾಣ ಮಾಡಿ ಆಫೀಸಿಗೆ ತೆರಳುತ್ತಿದ್ದ.
ಬರಬರುತ್ತಾ ತಂದೆಯ ಆರೋಗ್ಯ ಬಿಗಡಾಯಿಸಿತು.ಒಂದು ವರ್ಷದಲ್ಲಿ ಅಪ್ಪ ತೀರಿಕೊಂಡರು.ಮನೆಯ ಜವಾಬ್ದಾರಿ ಪ್ರಶಾಂತನ ಹೆಗಲ ಮೇಲೆ ಬಿತ್ತು.ಉಷಾ ಇಬ್ಬರು ಗಂಡು ಮಕ್ಕಳ ತಾಯಿಯಾದಳು.ಪ್ರಶಾಂತ್ ತಂಗಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ , ಒಳ್ಳೆಯ ಕುಲದ ವರನನ್ನು ಹುಡುಕಿ ಮದುವೆ ನಿಶ್ಚಯ ಮಾಡಿದ.ಆದರೆ ತಂಗಿ ಸ್ವಲ್ಪ ಕಪ್ಪು ಬಣ್ಣದವಳು.ಆದ್ದರಿಂದ ವರನ ಕಡೆಯವರ ವರದಕ್ಷಿಣೆಯ ಪಟ್ಟಿಯೂ ಉದ್ದವಾಗಿತ್ತು.ಅಮ್ಮ "ಏನಾದ್ರೂ ಮಾಡು ಪ್ರಶಾಂತ್..ತಂಗಿಯ ಮದುವೆಯ ಭಾರ ನಿನ್ನದೇ.. "ಎಂದರು.ಸಾಲ ಮಾಡಿ ಮದುವೆ ಮಾಡಿದ.
ಆ ವರ್ಷವೇ ಅವನಿಗೆ ಬೆಂಗಳೂರಿಗೆ ಮುಂಬಡ್ತಿಯೊಂದಿಗೆ ವರ್ಗಾವಣೆ ಆಯಿತು.ಮಡದಿ ಮಕ್ಕಳನ್ನು ಕರೆದುಕೊಂಡು ಬಂದರೆ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಅವರನ್ನು ಊರಿನಲ್ಲಿಯೇ ಬಿಟ್ಟು ತಾನು ಪುಟ್ಟ ರೂಮ್ ಹಿಡಿದು ವಾಸಿಸತೊಡಗಿದ. ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದ.
ತಮ್ಮನಿಗೆ ಬಿ ಫಾರ್ಮ್ ಓದಿಸಿದ.ಮನೆಯ ಹತ್ತಿರದ ಪಟ್ಟಣದಲ್ಲಿ ಅವನಿಗೊಂದು ಮೆಡಿಕಲ್ ಶಾಪ್ ತೆರೆದುಕೊಟ್ಟ.ನಿಧಾನವಾಗಿ ತಮ್ಮನ ಉದ್ಯೋಗವೂ ಒಳ್ಳೆಯ ಆದಾಯ ಗಳಿಸಲಾರಂಭಿಸಿತು.. "ಇವನಿಗೆ ಮದುವೆ ಮಾಡಿದ ಮೇಲೆ ನಿನ್ನ ಪತ್ನಿ ಮಕ್ಕಳ ಜೊತೆ ಉದ್ಯೋಗ ಸ್ಥಳದಲ್ಲಿ ವಾಸಮಾಡು ಪ್ರಶಾಂತ್" ಎನ್ನುತ್ತಿದ್ದರು ಅಮ್ಮ.ತಮ್ಮನಿಗೆ ವಿವಾಹ ಮಾಡಿ ಕಳೆದ ತಿಂಗಳು ತನ್ನ ಕುಟುಂಬವನ್ನು , ಎರಡು ವರ್ಷಗಳ ಹಿಂದೆ ವರ್ಗಾವಣೆ ಆಗಿದ್ದ ಬೆಳಗಾವಿಗೆ ಕರೆತಂದ.
ಅವನಿಗಿಷ್ಟದ ಪಾಯಸ ,ರಸಂ ಸಿದ್ಧಪಡಿಸಿದ್ದಳು ಉಷಾ.ಪ್ರೀತಿಯಿಂದಲೇ ಬಡಿಸಿದಳು.ಊಟ ಮಾಡಿ ಹೊರಟ ಪತಿಯಲ್ಲಿ "ರೀ.. ಇವತ್ತು ನಮ್ಮ ವಿವಾಹ ವಾರ್ಷಿಕೋತ್ಸವ ಮರೆತಿಲ್ಲ ತಾನೇ.. ಸಂಜೆ ಮನೆಗೆ ಬೇಗ ಬನ್ನಿ.. ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಹೋಗೋಣ.." ಎಂದಳು..ಅವಳ ಮೊಗದಲ್ಲಿ ಸಂಭ್ರಮ ಇತ್ತು.ಇದೇ ಮೊದಲ ಬಾರಿಗೆ ವಿವಾಹ ವಾರ್ಷಿಕೋತ್ಸವದ ದಿನ ಇಬ್ಬರೂ ಜೊತೆಯಲ್ಲಿ ಇದ್ದಿದ್ದು.
".ಸರಿ..ಸಂಜೆ ಹೊರಟುನಿಲ್ಲು" ಎಂದು ಹೇಳಿಹೊರಟರು. ಅದರಂತೆ ಸಂಜೆ ಬೇಗನೆ ಬಂದು ಝರಿಯಂಚಿನ ಸೀರೆಯುಟ್ಟು ಕಾಯುತ್ತಿದ್ದ ಉಷಾ ಹಾಗೂ ಅಪ್ಪ ತಂದಿದ್ದ ಹೊಸ ಪ್ಯಾಂಟ್, ಶರ್ಟ್ ಧರಿಸಿದ್ದ ಮಕ್ಕಳನ್ನು ಕರೆದೊಯ್ದ....ಒಂದು ಮನೆಯ ಮುಂದೆ ಕಾರು ನಿಲ್ಲಿಸಿದ.ಮನೆಯ ಗೇಟಿನ ಮುಂದೆ
"ಸ್ವರಾಂಜಲಿ ಸಂಗೀತಶಾಲೆ "ಎಂದು ಫಲಕ ನೇತಾಡುವುದನ್ನು ಕಂಡು"ರೀ.. ಎಲ್ಲಿಗೆ ಕರೆದುಕೊಂಡು ಬಂದಿದ್ದೀರಿ.."ಎಂದ ಉಷಾಳಿಗೆ "ಇದು ವಿವಾಹ ದಶವಾರ್ಷಿಕೋತ್ಸವಕ್ಕೆ ನಿನಗೆ ನನ್ನ ಉಡುಗೊರೆ" ಎಂದಾಗ ಅವಳ ಮೊಗದಲ್ಲಿ ಮಂದಹಾಸ ಮೂಡಿತ್ತು.ಪ್ರಶಾಂತನಿಗೆ ತನ್ನ ಮಡದಿಯ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಹೆಮ್ಮೆಯಿತ್ತು.
ಅಮ್ಮನೊಂದಿಗೆ ಮಕ್ಕಳನ್ನೂ ಸಂಗೀತ ಶಾಲೆಗೆ ಸೇರಿಸಿದಾಗ ಬಲು ಸಂತಸಗೊಂಡಳು ಉಷಾ.ನಂತರ ದೇವಸ್ಥಾನ ಕ್ಕೆ ತೆರಳಿ ದೇವರಿಗೆ ಕೈಮುಗಿದು "ನನಗೆ ಹೀಗೆ ನಗುನಗುತ್ತಾ ಸದಾ ಪತಿಯೊಂದಿಗೆ ಬದುಕಲು ಆವಕಾಶ ಕೊಡು"ಎಂದು ಉಷಾ ಬೇಡಿಕೊಂಡಳು.ಅವಳ ವಿರಹದ,ಕಷ್ಟದ ದಿನಗಳು ಕಳೆದು ಬಾಳಿನಲ್ಲಿ ಸುಖದ ಬೆಳಕು ಗೋಚರಿಸಿತು...ಹತ್ತು ವರುಷ ಕಾದ ಅವಳ ತಾಳ್ಮೆಯನ್ನು ಮೆಚ್ಚಿದ ಪ್ರಶಾಂತ "ಮುಂದೆಂದೂ ಇವಳ ತಾಳ್ಮೆಯನ್ನು ಪರೀಕ್ಷಿಸಬೇಡ ದೇವಾ "ಎಂದು ಶಿರಬಾಗಿದ..
✍️... ಅನಿತಾ ಜಿ.ಕೆ.ಭಟ್.
31-05-2020.
Chanda kathe ❤️
ReplyDeleteಥ್ಯಾಂಕ್ಯೂ 💐🙏
Delete