ಮುದುಡಿದ ಮನವು ಅರಳಿದಾಗ
"ಇಲ್ಲ.. ನಾನು ನೃತ್ಯ ಮಾಡುವುದಿಲ್ಲ.. ಇನ್ನೆಂದೂ ನೃತ್ಯಾಭ್ಯಾಸದಲ್ಲಿ ತೊಡಗುವುದಿಲ್ಲ.. ಮತ್ತೆ ಮತ್ತೆ ನನ್ನ ಕೆಣಕಬೇಡ ಅಮ್ಮ.."ಎಂದು ಕಿರುಚಾಡಿದಳು ಆದಿ.ಏನೂ ತೋಚದಾಯಿತು ಅಮ್ಮ ಗೀತಾಗೆ.
"ಮಗಳೇ ನೀನೇ ಇಷ್ಟಪಟ್ಟು,ಹಠಮಾಡಿ ನೃತ್ಯ ತರಗತಿಗೆ ಸೇರಿದವಳು.ಈಗ ಹೋಗಲಾರೆ ಎಂದರೆ ಹೇಗೆ.. ಇನ್ನೊಮ್ಮೆ ಆಲೋಚನೆ ಮಾಡು.ಮನಸ್ಸು ಬದಲಾಯಿಸು"ಎಂದು ತಾಯಿ ಗೀತಾ ಬುದ್ಧಿ ಹೇಳುತ್ತಾಳೆ ಮಗಳಿಗೆ.
ಆದಿ ತುಂಬಾ ಚೂಟಿ ಹುಡುಗಿ.ಪಕ್ಕದ ಮನೆಯ ಸಲಿಲ ಅಕ್ಕ ಭರತನಾಟ್ಯ ಮಾಡೋದು ಕಂಡು ಮನೆಯಲ್ಲಿ ತಾನೂ ತಕಥೈ ತಕಧಿಮಿತ ಎಂದು ಕುಣಿಯುತ್ತಿದ್ದಳು.ತಾನೂ ನೃತ್ಯಗಾರ್ತಿಯಾಗಬೇಕೆಂಬ ಕನಸು ಕಂಡವಳು.ಗೀತಾದಂಪತಿಯಂತೂ ಮಗಳ ಆಸೆಗೆ ತಣ್ಣೀರೆರಚುವವರೇ ಅಲ್ಲ.ಆದಿಯನ್ನು ಕೂಡ ಸಲಿಲ ಕಲಿಯುತ್ತಿರುವ ನೃತ್ಯ ಶಾಲೆಗೆ ಸೇರಿಸಿದರು.
ನೃತ್ಯವಿದ್ವಾನ್ ರಂಗನಾಥ ಮಾಸ್ತರ್ ನಗರದ ಆಸುಪಾಸಿನಲ್ಲಿ ಹೆಸರುವಾಸಿ ನೃತ್ಯ ಗುರು.ವಾರಕ್ಕೆರಡು ದಿನ ಗೀತಾಳೇ ನೃತ್ಯ ತರಗತಿಗೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಳು.ಅದಕ್ಕಾಗಿಯೇ ವಾಹನ ಚಾಲನೆ ಮಾಡುವುದನ್ನು ಕಲಿತಳು.ಬಹಳ ಉತ್ಸಾಹದಿಂದ ಆದಿ ಅಭ್ಯಾಸ ಮಾಡುತ್ತಿದ್ದಳು .
ಬರಬರುತ್ತಾ ಆದಿ ತುಂಬಾ ಮಂಕಾದಳು. ಯಾವಾಗಲೂ ಒಬ್ಬಂಟಿಯಾಗಿರಲು ಪ್ರಯತ್ನಿಸುತ್ತಿದ್ದಳು.ನೃತ್ಯತರಗತಿಗೆ ಹೋಗುವ ಹೊತ್ತಿನಲ್ಲಿ ಸಿಡಿದೇಳುತ್ತಿದ್ದಳು.ಶಾಲೆಯಲ್ಲೂ ಅದೇ ರೀತಿ ಇರುವುದನ್ನು ಕಂಡು ಶಿಕ್ಷಕಿ ಗೀತಾಳಿಗೆ ಸುದ್ದಿ ಮುಟ್ಟಿಸಿದರು. ಗೀತಾದಂಪತಿಗಂತೂ ಏಕೈಕ ಪುತ್ರಿ ಏಕೆ ಹೀಗಾದಳು ಎಂದು ತಿಳಿಯದಾಯಿತು.
ದಿನಕಳೆದಂತೆ ಪರಿಸ್ಥಿತಿ ಗಂಭೀರವಾಯಿತು. ಕುಟುಂಬ ವೈದ್ಯರಲ್ಲಿ ದಂಪತಿ ಸಮಾಲೋಚನೆ ನಡೆಸಿದರು.ವೈದ್ಯರು ಆದಿಯನ್ನು ಕೂರಿಸಿ ಆಕೆಯೊಂದಿಗೆ ಆಪ್ತಸಮಾಲೋಚನೆ ನಡೆಸಿದರು.ನಂತರ ತನಗೆ ತಿಳಿದಿರುವ ಖ್ಯಾತ ಮನೋವೈದ್ಯ ಡಾ|ಚಿದಾನಂದ ಕಾಮತ್ ಅವರನ್ನು ಭೇಟಿಯಾಗುವಂತೆ ತಿಳಿಸಿದರು.ಮುಂದಿನ ಗುರುವಾರಕ್ಕೆ ವೈದ್ಯರ ಭೇಟಿಗೆ ಸಮಯ ನಿಗದಿಯಾಯಿತು.ಚಿದಾನಂದ ಕಾಮತ್ ಅವರು ಹೆಸರಿಗೆ ತಕ್ಕಂತೆ ಯಾವಾಗಲೂ ಆನಂದದಿಂದಲೇ ಇರುವವರು, ಮಾತನಾಡಿಸುವವರು.ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೆ ಸರಳವಾಗಿ ಬೆರೆಯುವವರು.
******
ಕಾಮತ್: ಹಾಯ್ ಆದಿ... ಇಂದಿನಿಂದ ನೀನೂ ನಾನೂ ಫ್ರೆಂಡ್ಸ್...
ಆದಿ: ಹ್ಞೂಂ..
ಕಾಮತ್: ನಿಂಗೆ ಮಿಲ್ಕೀಬಾರ್ ಚಾಕಲೇಟ್ ಇಷ್ಟ ತಾನೇ... ಎಷ್ಟು ಬೇಕೋ ತಗೋ...
ಎನ್ನುತ್ತಾ ಚಾಕೋಲೇಟ್ ಡಬ್ಬವನ್ನೆ ಕೈಗಿತ್ತರು.
ಚಾಕೋಲೇಟ್ ತಿನ್ನುತ್ತಿದ್ದ ಆದಿಯಲ್ಲಿ ಸಮಾಧಾನ, ಜಾಣ್ಮೆಯಿಂದ ಒಂದೊಂದೇ ಪ್ರಶ್ನೆ ಕೇಳತೊಡಗಿದರು.ಮಾತನಾಡುತ್ತಾ ಸಮಯ ಮೂವತ್ತು ನಿಮಿಷ ದಾಟಿದ್ದು ಇಬ್ಬರಿಗೂ ತಿಳಿಯಲಿಲ್ಲ.ಇಬ್ಬರ ನಡುವೆ ಕ್ಲೋಸ್ ಫ್ರೆಂಡ್ ಶಿಪ್ ಬೆಳೆಯಿತು.
ವೈದ್ಯರು ಮುಂದಿನ ವಾರವೂ ಆಪ್ತಸಮಾಲೋಚನೆಗೆ ಬರಹೇಳಿದರು.ಹೀಗೆ ಕೆಲವು ವಾರಗಳ ಆಪ್ತ ಸಮಾಲೋಚನೆಯಿಂದ ಆದಿ ಚೇತರಿಸುತ್ತಿದ್ದಳು. ಮಂಕುತನ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬಂತು.ಗೀತಾ ದಂಪತಿಗೆ ಕೂಡ ಆಪ್ತಸಮಾಲೋಚನೆಗೆ ಒಂದು ದಿನ ಬರಹೇಳಿದರು.ಆದಿಯ ಮನಸ್ಸಿಗೆ ಘಾಸಿ ಮಾಡಿದ್ದ ವಿಷಯಗಳನ್ನು ಮನದಟ್ಟು ಮಾಡಿದರು.
ರಂಗನಾಥ್ ಮಾಸ್ತರ್ ಬಹಳ ಶಿಸ್ತಿನ ನೃತ್ಯ ಗುರು.ನೃತ್ಯದ ಪಟ್ಟುಗಳನ್ನು ಸರಿಯಾಗಿ ಮಾಡದಿದ್ದರೆ ಪೆಟ್ಟು ಖಂಡಿತಾ.ಕೆಲವೊಮ್ಮೆ ಸರಿಯಾಗಿ ನೃತ್ಯ ಮಾಡಿದರೂ ಗರುಗಳ ಮೂಡ್ ಸರಿಯಿಲ್ಲದಿದ್ದರೆ ಪೆಟ್ಟು, ಕೊಳಕು ಚುಚ್ಚು ಮಾತು ಕೇಳಬೇಕಾಗುತ್ತಿತ್ತು . ಇದು ಎಳೆಯ ಹೃದಯಕ್ಕೆ ನಾಟಿತ್ತು, ಗಾಯಗೊಳಿಸಿತ್ತು.ಮಗಳ ತರಗತಿಗೆ ಪೋಷಕರಿಗೆ ಪ್ರವೇಶವಿಲ್ಲದ್ದರಿಂದ ಗೀತಾದಂಪತಿಗಳಿಗೆ ತಿಳಿಯಲಿಲ್ಲ.ಅಮ್ಮ ಅಪ್ಪನೂ ಗದರಿದರೆ ಎಂಬ ಭಯದಿಂದ ಆದಿಯೂ ಹೇಳಿಕೊಳ್ಳಲು ಹಿಂಜರಿದಳು. ಹೇಳಿಕೊಳ್ಳಲಾಗದೆ ,ಸಹಿಸಲಾಗದೆ ಕೊರಗಿ ಮುಗ್ಧ ಬಾಲೆ ಮಂಕಾಗಿದ್ದಳು.
ಇದನ್ನು ಕೇಳಿದ ದಂಪತಿ ನಮ್ಮ ಮಗಳು ಮೊದಲಿನಂತಾದರೆ ಸಾಕು.. ಭರತನಾಟ್ಯ ಮಾಡದಿದ್ದರೂ ಪರವಾಗಿಲ್ಲ.. ಎಂದು ತಾವು ಆದಿಯ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಕೇಳಿ ತಿಳಿದುಕೊಂಡರು.ಒಂದು ವರ್ಷದಲ್ಲಿ ಆದಿ ಸಂಪೂರ್ಣ ಮೊದಲಿನಂತಾದಳು.ಡಾ|ಕಾಮತ್ ಅವಳ ಪಾಲಿಗೆ ಪ್ರೀತಿಯ ಕಾಮತ್ ಅಂಕಲ್ ಆಗಿಬಿಟ್ಟಿದ್ದರು.ಕಾಮತ್ ಅಂಕಲ್ ಅವರ ಬಳಿ ತಾನು ನೃತ್ಯ ಕಲಿಯಬೇಕು, ನೃತ್ಯದಲ್ಲಿ ಸಾಧನೆ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದಳು.ಕಾಮತ್ ಅವರು ತನಗೆ ತಿಳಿದಿರುವ ಸ್ನೇಹಿತೆಯಾದ ವಿದುಷಿ ಶ್ಯಾಮಲಾ ಪ್ರಸಾದ್ ಅವರನ್ನು ಸೂಚಿಸಿದರು.ಗೀತಾದಂಪತಿ ಮೊದಲು ಭರತನಾಟ್ಯದ ಸಹವಾಸವೇ ಇನ್ನು ಬೇಡ ಎಂದುಕೊಂಡರೂ ಕೊನೆಗೆ ಶಾಂತಚಿತ್ತದ ಗುರುಗಳನ್ನು ಕಂಡು ಒಪ್ಪಿಗೆ ನೀಡಿದರು.ಆದಿಯನ್ನು ಶ್ಯಾಮಲಾ ಮೇಡಂ ಮಗಳಂತೆ ಕಂಡರು.ನೃತ್ಯಾಭ್ಯಾಸ ಯಾವುದೇ ಅಡ್ಡಿಯಿಲ್ಲದೆ ಸಾಗಿತು.ಆಕೆಯಲ್ಲಿ ಭವಿಷ್ಯದಲ್ಲಿ ಉತ್ತಮ ನೃತ್ಯಗಾರ್ತಿಯಾಗಬಲ್ಲಳೆಂಬ ಭರವಸೆಯನ್ನು ಕಂಡರು.
******
ನಗರದ ಪುರಭವನದಲ್ಲಿ ಭವ್ಯವಾದ ವೇದಿಕೆ ಸಜ್ಜಾಗಿದೆ. ಹಿಮ್ಮೇಳದವರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದರು.ಕಾರ್ಯಕ್ರಮ ವೀಕ್ಷಣೆಗೆ ದೂರದೂರದಿಂದ ಜನ ಬರುತ್ತಿದ್ದರು. ಆದಿ ಕೂಡ ಅಪ್ಪ ಅಮ್ಮನ ಜೊತೆಗೆ ಕಾರ್ಯಕ್ರಮಕ್ಕೆ ಎರಡು ಗಂಟೆ ಮೊದಲೇ ಅಲ್ಲಿಗೆ ತಲುಪಿದ್ದಳು.ತನ್ನ ಸ್ನೇಹಿತೆ, ಶ್ಯಾಮಲಾ ಗುರುಗಳ ಪ್ರೀತಿಯ ಶಿಷ್ಯೆ ಕು|ಮೇಘಾಳ ನೃತ್ಯ ಪ್ರದರ್ಶನ ಅಂದು.
ವೇದಿಕೆಯ ಹಿಂಭಾಗದಲ್ಲಿ ಏನೋ ಗುಸುಗುಸು ಪಿಸುಮಾತು ಕೇಳಿ ಬಂದಿದೆ.ಗುರುಗಳು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ .ತನ್ನ ಗುರುಗಳು ಇಷ್ಟೊಂದು ಒತ್ತಡಕ್ಕೆ ಸಿಲುಕಿದ್ದನ್ನು ಆದಿ ಇದೇ ಮೊದಲು ನೋಡುತ್ತಿರುವುದು.ಈಗ ಏನು ಮಾಡುವುದು ಎಂದು ಹಿಮ್ಮೇಳದವರಲ್ಲಿ ಕೇಳುತ್ತಾ..ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮ ರದ್ದುಗೊಳಿಸೋಣವೇ ...? ಎಂದು ಶ್ಯಾಮಲಾ ಮೇಡಂ ಹೇಳೋದನ್ನು ಕೇಳಿಸಿಕೊಂಡಳು ಆದಿ.ತನ್ನ ಪ್ರೀತಿಯ ಗುರುಗಳು ಇಷ್ಟೊಂದು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದನ್ನು ಕಾಣುವಾಗ ಮನಸ್ಸು ತಡೆಯದೆ ಆದಿ ಮೆಲ್ಲನೆ ಗುರುಗಳ ಬಳಿ ತೆರಳಿ"ನನ್ನಿಂದ ಏನಾದರೂ ಸಹಾಯ ಬೇಕಾ ಮೇಡಂ" ಎಂದು ಕೇಳಿಯೇ ಬಿಟ್ಟಳು.
ಶ್ಯಾಮಲಾ ಮೇಡಂಗೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಯಿತು.ಮೈಮರೆತು ಆಕೆಯನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತ "ಹೌದು.. ನನಗೊಂದು ಉಪಕಾರ ನಿನ್ನಿಂದ ಆಗಲೇ ಬೇಕು... ಆದಿಯಿಂದ ಮಾತ್ರ ಅದು ಸಾಧ್ಯ..ನನ್ನನ್ನು ಈ ಸಂದಿಗ್ಧತೆಯಿಂದ ನೀನೇ ಕಾಪಾಡಬೇಕು.. ಈಗಲೇ ತಯಾರಾಗು ನೃತ್ಯ ಪ್ರದರ್ಶನಕ್ಕೆ" ಎಂದರು.ಏಕೆ? ಏನು? ಎಂದು ಮರುಪ್ರಶ್ನೆ ಹಾಕದೆ ತಾಯಿಯನ್ನು ಕರೆದುಕೊಂಡು ಡ್ರೆಸ್ಸಿಂಗ್ ರೂಮ್ಗೆ ನಡೆದೇ ಬಿಟ್ಟಳು.ಕಾರ್ಯಕ್ರಮಕ್ಕೆ ಮುನ್ನವೇ ತಯಾರಾಗಿ ಆತ್ಮವಿಶ್ವಾಸದಿಂದ ವೇದಿಕೆಯ ಬಳಿಗೆ ಆಗಮಿಸಿದಳು.ಗುರುಹಿರಿಯರ ಆಶೀರ್ವಾದ ಪಡೆದುಕೊಂಡಳು.
ನಿಗದಿತ ಸಮಯಕ್ಕೆ ಗಣೇಶನ ಸ್ತುತಿಯೊಂದಿಗೆ ನೃತ್ಯ ಪ್ರದರ್ಶನ ಆರಂಭಿಸುತ್ತಿದ್ದಂತೆ ವೀಕ್ಷಕರಿಂದ ಅದ್ಭುತ ಕರತಾಡನ ಕೇಳಿಬಂತು.ತಿಲ್ಲಾನದವರೆಗೂ ಅದೇ ರೀತಿ ಬೆಂಬಲ ಮುಂದುವರಿಯಿತು.ಆಗಾಗ ವನ್ಸ್ ಮೋರ್ ಎಂದು ಉದ್ಗಾರ ಕೂಡ ಕೇಳುತ್ತಿತ್ತು.ಕಾರ್ಯಕ್ರಮದ ಕೊನೆಯಲ್ಲಿ ವಿದುಷಿ ಶ್ಯಾಮಲಾ ಪ್ರಸಾದ್ ಅವರು "ಇಂದು ನೃತ್ಯ ಪ್ರದರ್ಶನ ನೀಡಬೇಕಾಗಿದ್ದ ಕು| ಮೇಘಾರವರ ತಂದೆಗೆ ಅಪಘಾತವಾಗಿ ಗಂಭೀರಸ್ಥಿತಿಯಲ್ಲಿದ್ದುದರಿಂದ ಆಕೆಯ ಬದಲು ಶಿಷ್ಯೆ ಕು| ಆದಿ ಪ್ರದರ್ಶನ ನೀಡಿದ್ದಾರೆ.ಸಂದರ್ಭೋಚಿತವಾಗಿ ಕಾರ್ಯಕ್ರಮಕ್ಕೆ ಚ್ಯುತಿ ಬಾರದಂತೆ ಅಮೋಘ ಅಭಿನಯದಿಂದ ಎಲ್ಲರ ಮನಸೂರೆಗೊಂಡ ಕು| ಆದಿಗೆ ಧನ್ಯವಾದಗಳು 🙏.ಇಂತಹ ಶಿಷ್ಯೆಯನ್ನು ಪಡೆದ ನಾನು ಧನ್ಯೆ ......"ಎಂದಾಗ ಆದಿಯ ಕಣ್ಣಿಂದ ಆನಂದಭಾಷ್ಪ ಜಾರಿತು.ಗುರುಗಳ ಕಾಲಿಗೆ ನಮಸ್ಕರಿಸಿದಳು.
ಗೀತಾದಂಪತಿಗಳು ಮಗಳ ಸಮಯೋಚಿತ ನಿರ್ಧಾರದಿಂದ ,ಉತ್ತಮ ನೃತ್ಯಪ್ರದರ್ಶನದಿಂದ ಆನಂದತುಂದಿಲರಾದರು.ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ವೀಕ್ಷಿಸಿದ ಕಾಮತ್ ಅಂಕಲ್ ಗೆ ಪ್ರದರ್ಶನ ನೀಡುತ್ತಿರುವುದು ಆದಿ.. ಮೇಘಾ ಅಲ್ಲ.. ಎಂದು ಆಗಾಗ ಅನಿಸುತ್ತಿತ್ತು.ತಮ್ಮ ಊಹೆ ನಿಜವೆಂದು ತಿಳಿದು ಸಂತಸಗೊಂಡು" ಉತ್ತಮ ಭರತನೃತ್ಯ ಕಲಾವಿದೆಯಾಗು " ಎಂದು ತುಂಬು ಹೃದಯದಿಂದ ಆಶೀರ್ವದಿಸಿದರು.ಡಾ|ಕಾಮತ್ ಅವರು ತನ್ನ ಚಿಕಿತ್ಸೆಯಿಂದ ಚೇತರಿಸಿಕೊಂಡ ಆದಿಯನ್ನು ಕಂಡು ವೃತ್ತಿಜೀವನದ ಬಗ್ಗೆ ಹೆಮ್ಮಪಟ್ಟುಕೊಂಡರು.
✍️... ಅನಿತಾ ಜಿ.ಕೆ.ಭಟ್.10-07-2019.
ಚಿತ್ರ :ಅಂತರ್ಜಾಲ ಕೃಪೆ.
2019 ರ ಜೂನ್ ತಿಂಗಳ ಪ್ರತಿಲಿಪಿ ರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಸ್ಫೂರ್ತಿದಾಯಕ ಪ್ರಭೇದದಲ್ಲಿ ಈ ಕಥೆಯು ಎಂಟನೇ ಸ್ಥಾನ ಗಳಿಸಿದೆ...
ಪ್ರತಿಲಿಪಿ ವೇದಿಕೆಗೂ,ರೂವಾರಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು 🙏.
👌👌
ReplyDelete