ಲೇಜಿ ಫೆಲೋ
"ಅಪ್ಪಾ... ಅಪ್ಪಾ "ಎನ್ನುತ್ತಾ ಓಡಿಬಂದಳು ಮಗಳು.
"ಅಪ್ಪಾ.. ಇವತ್ತು ನನ್ನ ಹುಟ್ಟುಹಬ್ಬ.ಅಮ್ಮ ಎಷ್ಟೊಂದು ಚೆಂದದ ಅಂಗಿ ಕೊಡಿಸಿದ್ದಾರೆ ನೋಡು.."
"ಹೌದು ಮಗಳೇ .. ಎಷ್ಟು ಚೆನ್ನಾಗಿದೆ !! ಹ್ಯಾಪಿ ಹುಟ್ದಬ್ಬ"
"ಅಷ್ಟೇನಾ.. ಅಪ್ಪ .."ಮುಖ ಸಿಂಡರಿಸಿಕೊಂಡಳು ಮಗಳು.
"ನೀನು ಚಂದನದ ಗೊಂಬೆ ತರಹ ಕಾಣುತ್ತಿದ್ದೀಯಾ ಮಗಳೇ.."
"ಇನ್ನೂ ಚೆಂದ ಕಾಣಲ್ವಾ.. ನಾನು.. ಬಾರ್ಬಿ ಡಾಲ್ ತರಹ.. "ಎಂದಳು ಮುದ್ದಾಗಿ.
"ಬಾರ್ಬಿಡಾಲ್ ಎಂಬ ಆಂಗ್ಲಸುಂದರಿಗಿಂತ ನಮ್ಮ ಅಚ್ಚಕನ್ನಡದ ಚಂದನದ ಗೊಂಬೆಯೇ ಅಪ್ರತಿಮ ಸುಂದರಿ.."
ಎಂದಾಗ ಕಣ್ಣುಮಿಟುಕಿಸಿ,ಬಾಯಗಲಿಸಿ ನಕ್ಕು ಕೆನ್ನೆಯನ್ನು ಅಪ್ಪನ ಹತ್ತಿರ ತಂದಳು.
"ಹೋಗ್ಲಿಬಿಡು ಅಪ್ಪ ... ಒಂದು ಸಿಹಿಮುತ್ತಾದರೂ ಕೊಡಬಾರದೇ..?"
"ಅದಕ್ಕೇನಂತೆ ಮಗಳೇ.." ಎನ್ನುತ್ತಾ ಮಗಳನ್ನು ಮುದ್ದಿಸಿ ಮುತ್ತಿನ ಮಳೆಗರೆದರು.
"ಅಪ್ಪಾ.. ನಾನು ಈ ಡ್ರೆಸ್ ಹಾಕಿಕೊಂಡು ನೃತ್ಯ ಮಾಡಬೇಕು ..ಬಾ ನೀನೂ ನನ್ನೊಂದಿಗೆ ನೃತ್ಯ ಮಾಡುವಿಯಂತೆ"
"ನಾನು.." ದೊಡ್ಡ ಉದ್ಗಾರ ಹೊರಡಿಸಿದ ಅಪ್ಪ.
"ಹೌದು.. ಯಾಕಪ್ಪಾ ನೀನು ನೃತ್ಯ ಮಾಡಬಾರದಾ"
"ಅದೆಲ್ಲ ನಿನ್ನಂತಹ ತೆಳ್ಳಗೆ-ಬೆಳ್ಳಗಿನವರು ಮಾಡಿದರೆ ಚಂದ .ನನ್ನಿಂದ ಈ ದಢೂತಿ ಶರೀರವನ್ನು ಹೊತ್ತುಕೊಂಡು ನೃತ್ಯಗೈಯಲು ಸಾಧ್ಯವಿಲ್ಲ ಮಗಳೇ.."
"ನಮ್ಮ ಟೀಚರ್ ಹೇಳಿದ್ರು.. ನೃತ್ಯ ಮಾಡುತ್ತಿದ್ದರೆ ಶರೀರದಲ್ಲಿ ಕೊಬ್ಬು ತುಂಬಿಕೊಳ್ಳುವುದಿಲ್ಲವಂತೆ. ಹೆಚ್ಚಾದ ಕೊಬ್ಬು ಕೂಡ ಕರಗುತ್ತದಂತೆ. ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲವೇ . ಬನ್ನಿ ಜೊತೆಗೆ ಹೆಜ್ಜೆ ಹಾಕೋಣ."
"ನೀನು ನೃತ್ಯ ಮಾಡು.. ನಾನು ಇಲ್ಲಿಂದಲೇ ತಾಳ ಹಾಕುತ್ತೇನೆ " ಎಂದವರು ಕುಳಿತಲ್ಲಿಂದಲೇ..ಸ್ವಲ್ಪ ಸ್ವಲ್ಪವೇ ಶರೀರವನ್ನು ಆಡಿಸಲಾರಂಭಿಸಿ.. ಎದ್ದುನಿಂತು ನೃತ್ಯ ಮಾಡತೊಡಗಿದರು.
"ಶಹಬ್ಬಾಸ್ .. ಅಪ್ಪಾ.ನೋಡಿ.. ನಾನು ಈ ಸ್ಟೂಲ್ ಹತ್ತಿ ನೃತ್ಯ ಮಾಡುತ್ತೇನೆ. " ಸ್ಟೂಲ್ ಹತ್ತಿ ವಯ್ಯಾರಿ ಬೊಂಬೆ ಕುಣಿಯಲಾರಂಭಿಸಿದಳು.
ಅಪ್ಪ ಡ್ಯಾನ್ಸ್ ಮಾಡಿ ಸುಸ್ತಾಗಿ ಕುಳಿತುಕೊಂಡರು.
"ಏನಪ್ಪಾ ..ನೀನು..!! ಇಷ್ಟು ಲೇಜಿಫೆಲೋ.. ಅದಕ್ಕೆ ನಿನ್ನ ಶರೀರದಲ್ಲಿ ಕೊಬ್ಬು ತುಂಬಿದೆ. ನೃತ್ಯವೂ ಮಾಡಲ್ಲ.. ಕೆಲಸವೂ ಮಾಡಲ್ಲ.. ಮತ್ತೆ ಹೇಗೆ ಕೊಬ್ಬು ಕರಗುತ್ತದೆ..?"ಎನ್ನುತ್ತಾ ತಾನು ನೃತ್ಯ ಮುಂದುವರಿಸಿದಳು.
"ಏನಂದೆ..? ನನ್ನನ್ನೇ ಕೆಲಸ ಮಾಡಲ್ಲ ಅಂತೀಯಾ.. ಕೊಬ್ಬು ಅಂತೀಯಾ ..ನೋಡ್ತಾ ಇರು ನಿನ್ನ ..ಏನು ಮಾಡ್ತೀನಿ ಅಂತ..."
ಎನ್ನುತ್ತಾ ನೃತ್ಯ ಮಾಡುತ್ತಿದ್ದ ಮಗಳ ತಲೆಕೂದಲಿಗೆ ಹಿಂದಿನಿಂದ ಕೈಹಾಕಿ ಎಳೆದು " ಕೂದಲನ್ನು ಕಟ್ಟಿ..ಏನು ಮಾಡ್ತೀನಿ ನೋಡು"ಎಂದಾಗ ಬೆದರಿದ ಅವಳ ಹೆಜ್ಜೆ ತಾಳ ತಪ್ಪಿ ಅವಳು ಬೀಳುವಂತಾದಾಗ ಪಶ್ಚಾತಾಪಪಟ್ಟ ತಂದೆ "ಕ್ಷಮಿಸು ಮಗಳೇ.ಸಿಟ್ಟಿನಲಿ ಅಂದೆ"ಅನ್ನುತ್ತಾ ಮಗಳನ್ನೆತ್ತಿಕೊಂಡು ಎದೆಗೊತ್ತಿಕೊಂಡರು.
✍️..ಅನಿತಾ ಜಿ.ಕೆ.ಭಟ್ .
06-08-2020.
Appa magalu 👌👌
ReplyDeleteಅಲ್ವಾ.. ಅಪ್ಪ ಮೃದು ಹೃದಯಿ.. ಧನ್ಯವಾದಗಳು 💐🙏
Delete